ಸಂಪಾಜೆ, ಸೆ 01 (DaijiworldNews/DB): ಕೊಯನಾಡಿನಲ್ಲಿ ಜಲಸ್ಪೋಟದಿಂದ ಮನೆಗೆ ನೀರು ನುಗ್ಗಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಕೊಯನಾಡಿನ ಎಂಟು ಕುಟುಂಬಗಳು ಶಾಸಕ ಕೆ.ಜಿ. ಬೋಪಯ್ಯ ಅವರ ಎದುರೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೆ ಪತ್ರ ಬರೆದಿಟ್ಟು ಕುಟುಂಬ ಸಮೇತ ಇದೇ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಕಾಳಜಿ ಕೇಂದ್ರಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿ ಆಶ್ರಯ ಪಡೆಯುತ್ತಿರುವ ಕೊಯನಾಡಿನ ಜನರು ಶಾಸಕರೆದುರು ಆಕ್ರೋಶ ಹೊರ ಹಾಕಿದ್ದಾರೆ. ಕಿಂಡಿ ಅಣೆಕಟ್ಟು ಮಾಡುವಾಗ ಜನರ ಅಭಿಪ್ರಾಯ ಕೇಳದೇ ಮಾಡಿದ್ದೀರಿ. ಆದರೆ ಈಗ ಸಮಸ್ಯೆ ಎದುರಿಸುತ್ತಿರುವವರು ನಾವು. ಪ್ರಾಕೃತಿಕ ವಿಕೋಪ ಅಲ್ಲ, ಇದೊಂದು ಮಾನವ ನಿರ್ಮಿತ ವಿಕೋಪ. ನೀವೆಲ್ಲಾ ಸೇರಿ ನಮ್ಮನ್ನು ನಿರಾಶ್ರಿತರನ್ನಾಗಿ ಮಾಡಿದ್ದೀರಿ ಎಂದು ಶಾಸಕರನ್ನು ಜನರು ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ, ವಿವಿಧ ಸಚಿವರು ಬಂದು ನೋಡಿ ಹೋದರೇ ಹೊರತು ಪರಿಹಾರವನ್ನು ದೊರಕಿಸಿಕೊಡುವ ಕೆಲಸವನ್ನು ಯಾರೂ ಮಾಡಿಲ್ಲ. ನಮ್ಮ ಅಳಲು ಕೇಳುವ ಪರಿಸ್ಥಿತಿಯಲ್ಲಿ ನೀವ್ಯಾರೂ ಇಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸದಿದ್ದರೆ ಇದೇ ಕಿಂಡಿ ಅಣೆಕಟ್ಟಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಜನ ಶಾಸಕರೆದುರು ಅಸಮಾಧಾನ ಹೊರಹಾಕಿದರು. ಜನರನ್ನು ಸಮಾಧಾನಪಡಿಸಲು ಶಾಸಕರು ಯತ್ನಿಸಿದರಾದರೂ, ಜನರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೇ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.