ಮಂಗಳೂರು, ಫೆ 05(SM): ಮೈಸೂರು ಮೂಲದ ಬಾಲಕಿಯನ್ನು ಅಪಹರಣಗೈದು ಮಂಗಳೂರಿಗೆ ಕರೆ ತಂದು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಇದೀಗ ಮೂವರು ಪಾದ್ರಿಗಳನ್ನು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೂವರು ಪಾದ್ರಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನರಸಿಂಹ ರಾಜ್ ಮೊಹಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸಂತ್ರಸ್ತೆ ಬಾಲಕಿ ತಾಯಿ ನೀಡಿದ ದೂರಿನ ಅನ್ವಯ ಹೈಕೋರ್ಟ್ ತನಿಖೆ ನಡೆಸಲು ಪೊಲೀಸರಿಗೆ ಆದೇಶವನ್ನು ನೀಡಿತ್ತು. ತನಿಖೆ ಆರಂಭಿಸಿದ ಪೊಲೀಸರು ಇದೀಗ ಮೂವರು ಪಾದ್ರಿಗಳನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತ ಆರೋಪಿಗಳನ್ನು ಬಲ್ಮಠದ ಸೆಬಸ್ಟಿಯನ್, ಜೊಶ್ವಾ ಅಮನ್ ಮತ್ತು ಬೆನ್ನೆಟ್ ಅಮನ್ ಎಂದು ಗುರುತಿಸಲಾದೆ. 2018ರ ನವಂಬರ್ ತಿಂಗಳಲ್ಲಿ ಆರೋಪ ಎದುರಿಸುತ್ತಿರುವ ಪಾದ್ರಿಗಳು ಬಾಲಕಿಯನ್ನು ಮಂಗಳೂರಿನ ನರ್ಸಿಂಗ್ ಹೋಂವೊಂದರಲ್ಲಿ ಉದ್ಯೋಗ ನೀಡುವುದಾಗಿ ಕರೆದುಕೊಂಡು ಬಂದಿದ್ದರು. ಅಲ್ಲದೆ ಆಕೆಗೆ ನೂತನ ಮನೆ ನಿರ್ಮಾಣಕ್ಕೆ ೧ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು. ಬಾಲಕಿಯನ್ನು ಕರೆದೊಯ್ದ ಪಾದ್ರಿಗಳು ಆಕೆಯನ್ನು ತಮ್ಮ ಗೃಹ ಬಂಧನದಲ್ಲಿರಿಸಿದ್ದರು. ಹಾಗೂ ಡಿಸೆಂಬರ್ ತಿಂಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬುವುದಾಗಿ ಆಕೆಯ ತಾಯಿ ಆರೋಪಿಸಿದ್ದರು.
ಅಲ್ಲದೆ ಬಾಲಕಿಯ ತಾಯಿ ಹೈಕೋರ್ಟ್ ಗೆ ಕೂಡ ದೂರು ನೀಡಿದ್ದರು. ಆಕೆಯ ದೂರಿನ ಮೇರೆಗೆ ಆರೋಪ ಎದುರಿಸುತ್ತಿರುವ ಪಾದ್ರಿಗಳನ್ನು ವಿಚಾರಣೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆ ಇದೀಗ ಪಾದ್ರಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.