ಮಂಗಳೂರು, ಆ 31 (DaijiworldNews/SM): ಸೆ. 2ರಂದು ಮಂಗಳೂರಿನಲ್ಲಿ ನಡೆಯುತ್ತಿರುವ ಮೋದಿ ಕಾರ್ಯಕ್ರಮಕ್ಕೆ ಬಲವಂತವಾಗಿ ಜನರಿಗೆ ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಯುವ ಮೈದಾನವು ಸೇರುವ ಜನತೆಗೆ ಸಾಕಾಗುತ್ತೋ ಇಲ್ಲವೋ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಜನರು ಸೇರುವ ನಿರೀಕ್ಷೆ ಕಂಡಾಗ ಈಗ ಇರುವ ಮೈದಾನಕ್ಕಿಂತ ದೊಡ್ಡ ಸ್ಥಳ ಬೇಕೆಂದು ಕಾಣಿಸುತ್ತಿದೆ. ಉಡುಪಿ ಹಾಗೂ ದ.ಕ.ಜಿಲ್ಲೆಯ ಎಲ್ಲಾ ಗ್ರಾ.ಪಂ. ಪಿಡಿಒಗಳಿಗೆ ನೋಟೀಸ್ ನೀಡಲಾಗಿದೆ. ಪ್ರತಿ ಗ್ರಾಮದಿಂದ 250 ಜನರನ್ನು ಕರೆತರಲು ಜಿಲ್ಲಾಡಳಿತ ನೊಟೀಸ್ ನೀಡಲಾಗಿದೆ ಎನ್ನುವ ಆರೋಪವಿದೆ.
ಕಂದಾಯ ಇಲಾಖೆಯಿಂದ ವಿಎ ಸೇರಿದಂತೆ ಎಲ್ಲಾ ಅಧಿಕಾರಿಗಳು ಬರಬೇಕೆಂಬ ಸೂಚನೆ ನೀಡಲಾಗಿದೆ. ಗ್ರಾಪಂ ಕಾರ್ಯದರ್ಶಿ, ಲೈನ್ ಮ್ಯಾನ್, ನೀರು ಬಿಡುವವನಿಗೂ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಶಾಲಾ ಕಾಲೇಜುಗಳಿಗೆ ರಜೆ ನೀಡಿ ಎಲ್ಲಾ ಮಕ್ಕಳೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಚನೆ ನೀಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆರೋಪಿಸಿದ್ದಾರೆ.