ಕಾಸರಗೋಡು, ಆ 31 (DaijiworldNews/DB): ರೈಲು ಹಳಿಯಲ್ಲಿ ಕಾಂಕ್ರೀಟ್ ಒಳಗೊಂಡ ಕಬ್ಬಿಣದ ಬೀಮ್ ಇಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡು ಮೂಲದ ಮಹಿಳೆಯೋರ್ವಳನ್ನು ರೈಲ್ವೆ ಭದ್ರತಾ ಪಡೆ ಹಾಗೂ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬೇಕಲದ ಕ್ವಾಟರ್ಸ್ವೊಂದರಲ್ಲಿ ವಾಸವಾಗಿರುವ ತಮಿಳುನಾಡು ವಿಲ್ಲಾಪುರದ ಕನಕವಳ್ಳಿ ( 22) ಬಂಧಿತ ಮಹಿಳೆ. ಗುಜರಿ ಹೆಕ್ಕುವ ಕಾಯಕ ನಡೆಸುತ್ತಿದ್ದ ಈಕೆ ಸಿಮೆಂಟ್ ಒಳಗೊಂಡ ಕಬ್ಬಿಣದ ಸರಳಿನಿಂದ ಸಿಮೆಂಟ್ ಬೇರ್ಪಡುವ ಉದ್ದೇಶದಿಂದ ರೈಲು ಹಳಿಯಲ್ಲಿ ಇಟ್ಟಿದ್ದಾಗಿ ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಈಕೆಯನ್ನು ಗಮನಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ನಡೆಸಿರುವುದನ್ನು ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 21ರ ಭಾನುವಾರ ಕಾಸರಗೋಡು –ಕಾಂಞಗಾಡು ಮಧ್ಯೆ ಹಾದು ಹೋಗುವ ಹಳಿಗಳಲ್ಲಿ ಕೋಟಿಕುಳಂ-ಬೇಕಲ ನಡುವೆ ಮೊದಲು ಈ ದುಷ್ಕೃತ್ಯ ನಡೆಸಲಾಗಿತ್ತು. ತೃಕ್ಕನ್ನಾಡ್ ದೇಗುಲದ ಹಿಂದೆ ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ಸರಳುಗಳು, ಬೀಮ್ ಪತ್ತೆಯಾಗಿತ್ತು. ರೈಲ್ವೆ ಗಾರ್ಡ್ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿ ಹೋಗಿತ್ತು.
ಒಂದು ತಿಂಗಳ ಅವಧಿಯಲ್ಲಿ ಕುಂಬಳೆಯಿಂದ ಬೇಕಲ ತನಕ ಐದಕ್ಕೂ ಅಧಿಕ ಇಂತಹ ಪ್ರಕರಣಗಳು ನಡೆದಿದೆ. ಕುಂಬಳೆ ನಿಲ್ದಾಣದ ಬಳಿಯಲ್ಲೂ ರೈಲ್ವೇ ಹಳಿಗಳ ಮೇಲೆ ಕಲ್ಲುಗಳು ಪತ್ತೆಯಾಗಿದ್ದವು. ಸುಮಾರು 35 ಕೆಜಿ ತೂಗುವ ಕಾಂಕ್ರೀಟ್ ತುಂಡೊಂದು ಪತ್ತೆಯಾಗಿದೆ. ಇದಲ್ಲದೆ ಚಿತ್ತಾರಿಯಲ್ಲಿ ಕೊಯಂಬತ್ತೂರು-ಮಂಗಳೂರು ರೈಲಿನ ಮೇಲೆ ಕಲ್ಲೆಸೆತ ನಡೆದಿತ್ತು. ತೃಕ್ಕನ್ನಾಡ್, ಕುಂಬಳೆ, ಹೊಸದುರ್ಗ, ತಳಂಗರೆದಲ್ಲಿ ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು.