ಮಂಗಳೂರು, ಆ 31 (DaijiworldNews/DB): ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರ ಮಂಗಳೂರು ಭೇಟಿ ಹಿನ್ನೆಲೆಯಲ್ಲಿ ಪ್ರಧಾನಿಯವರ ಸುಗಮ ಸಂಚಾರ, ಭದ್ರತೆ ಹಾಗೂ ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಮತ್ತು ಸಂಚಾರ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸೆಪ್ಟಂಬರ್ 2ರ ಬೆಳಗ್ಗೆ 6ರಿಂದ ಪ್ರಧಾನಿಯವರು ನಿರ್ಗಮಿಸುವವರೆಗೂ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಪ್ರಧಾನಿ ಕ್ರಾಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ಆಯಾಯ ಪ್ರದೇಶಗಳಲ್ಲಿ ಪಾರ್ಕಿಂಗ್ ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ನಿತ್ಯ ಸಂಚರಿಸುವ ವಾಹನಗಳ ಮಾರ್ಗಗಳನ್ನು ಅಂದು ಬದಲಾವಣೆ ಮಾಡಲಾಗುತ್ತಿದ್ದು, ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಎಲ್ಲೆಲ್ಲಿ ವಾಹನ ಸಂಚಾರ ನಿಷೇಧ?
* ಮಂಗಳೂರು ವಿಮಾನ ನಿಲ್ದಾಣದಿಂದ ಕಂಜಾರು – ಮರವೂರು – ಮರಕಡ – ಕಾವೂರು – ಬೊಂದೇಲ್ – ಪದವಿನಂಗಡಿ – ಯೆಯ್ಯಾಡಿ – ರಾಷ್ಟ್ರೀಯ ಹೆದ್ದಾರಿ 66 ರ ಕೆ.ಪಿ.ಟಿ. ಜಂಕ್ಷನ್ನಿಂದ – ಕೊಟ್ಟಾರ ಚೌಕಿ ಕೂಳೂರು – ಎನ್ಎಂಪಿಎವರೆಗೆ ಹಾದು ಹೋಗುವ ರಸ್ತೆಗಳ ಎರಡೂ ಬದಿಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ಬೆಳಗ್ಗೆ 6ರಿಂದ ಸಂಜೆ 6ರ ತನಕ ನಿಷೇಧಿಸಲಾಗಿದೆ.
* ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಂಗ್ರಕೂಳೂರು ಗೋಲ್ಡ್ ಪಿಂಚ್ ಮೈದಾನದ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯ ರಸ್ತೆಗಳಲ್ಲಿ ಮುಂಜಾನೆ 6ರಿಂದ ಸಂಜೆ 5ರ ತನಕ ಎಲ್ಲಾ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಿದೆ.
* ಬಂಗ್ರ ಕೂಳೂರು ಗೋಲ್ಡ್ ಪಿಂಚ್ ಸಿಟಿ ಮೈದಾನದ ಸಾರ್ವಜನಿಕ ಸಮಾವೇಶಕ್ಕೆ ಆಗಮಿಸುವ ಅತೀ ಗಣ್ಯ ವ್ಯಕ್ತಿಗಳು, ಗಣ್ಯ ವ್ಯಕ್ತಿಗಳು, ಫಲಾನುಭವಿಗಳು ಮತ್ತು ಸಾರ್ವಜನಿಕರು ಉಪಯೋಗಿಸುವ ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳಗಳಿಗೆ ಸಂಚರಿಸಲು ಮತ್ತು ತುರ್ತು ಸೇವೆಯ ವಾಹನಗಳು ಮೇಲ್ಕಂಡ ನಿಷೇಧಿತ ರಸ್ತೆಗಳಲ್ಲಿ ಸಂಚರಿಸಲು ಅನುಮತಿಸಲಾಗಿದೆ.