ಮಂಗಳೂರು, ಆ 31 (DijiworldNews/HR): ಪ್ರಧಾನಿ ನರೇಂದ್ರ ಮೋದಿಯ ಮಂಗಳೂರು ಭೇಟಿ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಮಾಹಿತಿಗಳನ್ನು ಹಂಚಿದ ಆರೋಪಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋಟೊವೊಂದರ ಮೇಲೆ ಗುರುತು ಹಾಕಿ ಆಕ್ಷೇಪಾರ್ಹ ಸಂದೇಶ ರವಾನೆ ಮಾಡಲಾಗುತ್ತಿದ್ದು, ಜೊತೆಗೆ ಪ್ರಧಾನಿ ಕಾರ್ಯಕ್ರಮದ ಬಗ್ಗೆ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಎರಡು ಪ್ರಕಾರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದರು.
ಇನ್ನು ನರೇಂದ್ರ ಮೋದಿ ಬರುವ ಕಾರ್ಯಕ್ರಮದ ಬಗ್ಗೆ ಗೊಂದಲ ಸೃಷ್ಟಿಸುವುದಕ್ಕಾಗಿ ಕೆಲವು ವಾಟ್ಸ್ಆ್ಯಪ್ ಗ್ರೂಪ್ಗಳನ್ನು ಸೃಷ್ಟಿಸಲಾಗಿದ್ದು, ಅಂತಹ ಗ್ರೂಪ್ಗಳ ಮೇಲೆ ಪೊಲೀಸ್ ಇಲಾಖೆಯು ವಿಶೇಷ ನಿಗಾ ವಹಿಸಿದ್ದು, ಮಾನಹಾನಿ, ತೇಜೋವಧೆ, ಆಕ್ಷೇಪಾರ್ಹ ಅಂಶಗಳನ್ನು ಉಲ್ಲೇಖಿಸಿ ಸಂದೇಶ ರವಾನಿಸಿದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.