ಕಾಸರಗೋಡು, ಆ 31 (DijiworldNews/HR): ಮುನ್ನಾಡು, ಮುಳಿಯಾರು, ಬೇಡಡ್ಕ ಗ್ರಾಮಗಳ ವಿವಿಧೆಡೆ ಮಂಗಳವಾರ ಮುಂಜಾನೆ ಸುರಿದ ಮಳೆಗೆ ಪ್ರವಾಹ ಹಾಗೂ ಭೂಕುಸಿತದಿಂದ ಮನೆಗಳಿಗೆ ಹಾನಿಯಾಗಿದೆ.
ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಮಧುವಾಹಿನಿ ನದಿಯ ನೀರು ದೇವಸ್ಥಾನದ ಮುಂಭಾಗ ಪ್ರವೇಶಿಸಿದೆ.
ಗುಡ್ಡ ಕುಸಿದಿದ್ದರಿಂದ ಬೇಡಗಂ ಒಲಿಯತ್ತಡ್ಕದ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಎರಡು ಮನೆಗಳ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಕಾನತ್ತೂರಿನ ಕೆಎಸ್ಆರ್ಟಿಸಿ ಬಸ್ ಚಾಲಕ ಚಂದ್ರನ್ ಅವರ ಮನೆಗೆ ನೀರು ನುಗ್ಗಿದೆ.
ಕಾನತ್ತೂರಿನಲ್ಲಿ ಎರಡು ಮನೆಗಳ ಮೇಲೆ ಗುಡ್ಡ ಕುಸಿದು ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಮುಚ್ಚಿರಕುಲಂನಲ್ಲಿರುವ ಲಲಿತಾ ಅವರ ಮನೆಗೂ ನೀರು ನುಗ್ಗಿದ್ದು, ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ.
ನೆಕ್ರಾಜೆ ಚೆನ್ನಡ್ಕ ನಿವಾಸಿ ಅಬ್ದುಲ್ಲ ಎಂಬವರ ಮನೆಗೆ ನೀರು ನುಗ್ಗಿದೆ. ಮನೆಯೊಳಗಿದ್ದ ಆರು ಮಂದಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಬದಿಯಡ್ಕ-ಕರಿಂಬಿಲ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ.