ಕಾಸರಗೋಡು, ಫೆ 04(SM): ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ ಬರೋಬ್ಬರಿ 112 ಕಿಲೋ ಗಾಂಜಾ ಸಹಿತ ಓರ್ವನನ್ನು ಕಾಸರಗೋಡು ಡಿ ಸಿ ಆರ್ ಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಭೀಮನಡಿಯ ನೌಫಾಲ್(29) ಎಂದು ಗುರುತಿಸಲಾಗಿದೆ. ಆದಿತ್ಯವಾರ ರಾತ್ರಿ ಮೌಕಾಡ್ -ಕಾಡುಮನಿ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಇನೋವಾ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಬಾರೀ ಪ್ರಮಾಣದ ಗಾಂಜಾ ಪತ್ತೆಯಾಗಿದೆ.
ಆಂಧ್ರಪ್ರದೇಶದಿಂದ ಗಾಂಜಾವನ್ನು ಕೇರಳಕ್ಕೆ ಸಾಗಾಟ ಮಾಡಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. ಗಾಂಜಾ ಸಾಗಾಟದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ರವರಿಗೆ ದಿನಗಳ ಹಿಂದೆಯೇ ಖಚಿತ ಮಾಹಿತಿ ಲಭಿಸಿತ್ತು. ಇದರಂತೆ ಈ ರಸ್ತೆಯಲ್ಲಿ ಬರುವ ವಾಹನಗಳ ಮೇಲೆ ನಿಗಾ ಇರಿಸಿದ್ದರು. ಇದರಂತೆ ಆದಿತ್ಯವಾರ ರಾತ್ರಿ ತಪಾಸಣೆ ನಡೆಸುತ್ತಿದ್ದಾಗ ಭಾರೀ ಪ್ರಮಾಣದ ಗಾಂಜಾ ಸಾಗಾಟ ಪತ್ತೆಯಾಗಿದೆ.
ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು ಒಂದು ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಆಂಧ್ರದಿಂದ ಗಾಂಜಾವನ್ನು ಜಿಲ್ಲೆಗೆ ತಂದು ಸಣ್ಣ ಪೊಟ್ಟಣ ಮೂಲಕ ವಿವಿಧೆಡೆಗೆ ಗಾಂಜಾವನ್ನು ಮಾರಾಟ ಮಾಡುತ್ತಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.
ಆಂದ್ರಪ್ರದೇಶದ ಈಸ್ಟ್ ಗೋದಾವರಿಯಿಂದ ಗಾಂಜಾ ಜಿಲ್ಲೆಗೆ ತಲುಪಿಸಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿ ಪರಾರಿಯಾಗಿರುವುದಾಗಿ ತಿಳಿಸಿದ್ದಾರೆ.