ಮಂಗಳೂರು, ಆ 31 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಅವರು, ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಮುಂಚಿತವಾಗಿಯೇ ಸಾರ್ವಜನಿಕರು ಮೈದಾನಕ್ಕೆ ಆಗಮಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಹಿತ ಸುಮಾರು ಒಂದುವರೆ ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕೆಲವು ಯೋಜನೆಗಳ ಪ್ರಯೋಜನವನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯಕ್ರಮವಿದೆ ಎಂದರು.
ಫಲಾನುಭವಿಗಳಿಗೆ ಕಡ್ಡಾಯ ಭಾಗವಹಿಸುವಿಕೆ ನಿರ್ದೇಶನ ನೀಡಿಲ್ಲ, ಮನವಿಯನ್ನಷ್ಟೇ ಮಾಡಲಾಗಿದೆ. ಸುರಕ್ಷತೆ ನಿಟ್ಟಿನಲ್ಲಿ ಕೆಲವೊಂದು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದವರು ತಿಳಿಸಿದರು.
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಕಾರ್ಯಕ್ರಮದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗುತ್ತಿದ್ದು, ಸಿಎಆರ್, ಕೆಎಸ್ಆರ್ಪಿ, ಹೋಮ್ಗಾರ್ಡ್ ಸಹಿತ ವಿವಿಧ ಘಟಕಗಳ ಅಧಿಕಾರಿ, ಸಿಬಂದಿಗಳನ್ನು ಬಂದೋಬಸ್ತ್ಗೆ ನಿಯೋಜನೆ ಮಾಡಲಾಗುತ್ತದೆ. ಆಕ್ಷೇಪಾರ್ಹ ವಸ್ತುಗಳನ್ನು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತರುವಂತಿಲ್ಲ ಎಂದರು.
ಕಮಿಷನರೆಟ್ ವ್ಯಾಪ್ತಿಯ 9 ಜಂಕ್ಷನ್ಗಳಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತದೆ. ಈಗಾಗಲೇ15 ಕಡೆ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಕಾರ್ಯಕ್ರಮದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದಾರೆ. ಈಗಾಗಲೇ ಈ ಸಂಬಂಧ 2 ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.