ಪುತ್ತೂರು, ಆ 31 (DijiworldNews/HR): ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್ ಅನ್ನು ದರೋಡೆ ಮಾಡಿ ಪರಾರಿಯಾದ ಘಟನೆ ಕಬಕ-ಪುತ್ತೂರು ರೈಲ್ವೇ ನಿಲ್ದಾಣದ ಸಮೀಪದ ಹಾರಾಡಿ, ಸಿಟಿ ಗುಡ್ಡೆ ಮಧ್ಯೆ ನಡೆದಿದೆ.
ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ರೈಲಿನಲ್ಲಿ ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಕಾರವಾರ ಮೂಲದ ಅಧ್ಯಾಪಕರಾಗಿರುವ ರಮೇಶ್ ಮತ್ತು ನಿರ್ಮಲಾ ದಂಪತಿ ಲಕ್ಷಾಂತರ ರೂ. ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡಿದ್ದಾರೆ.
ಇನ್ನು ನಿರ್ಮಲಾ ಅವರು ತಲೆಯ ಅಡಿಯಲ್ಲಿ ಇಟ್ಟಿದ್ದ ವ್ಯಾನಿಟಿ ಬ್ಯಾಗ್ ಅನ್ನು ಅಪರಿಚಿತ ವ್ಯಕ್ತಿ ಎಳೆಯಲು ಯತ್ನಿಸುತ್ತಿದ್ದುದು ಅವರ ಗಮನಕ್ಕೆ ಬಂದಿದ್ದು, ಆ ಕೂಡಲೇ ಅವರು ಆ ವ್ಯಕ್ತಿಯನ್ನು ತಳ್ಳಿದ್ದಾರೆ. ಈ ವೇಳೆ ನಿರ್ಮಲಾ ಅವರ ಬಳಿ ಇದ್ದ ವ್ಯಾನಿಟಿ ಬ್ಯಾಗ್ ತುಂಡಾಗಿ ನಗ-ನಗದು ಇದ್ದ ಬ್ಯಾಗು ವ್ಯಕ್ತಿಯ ಕೈ ಸೇರಿತ್ತು.
ರೈಲು ಬೋಗಿಯಿಂದ ಹಾರಲೆತ್ನಿಸಿದ್ದ ಆತನನ್ನು ಮಹಿಳೆಯು ಹಿಡಿದುಕೊಂಡು ರೈಲಿನ ಚೈನು ಎಳೆದಿದ್ದಾರೆ. ರೈಲು ನಿಧಾನವಾಗುತ್ತಿದ್ದಂತೆಯೇ ಆ ಅಪರಿಚಿತ ವ್ಯಕ್ತಿ ರೈಲಿನಿಂದ ಹಾರಿದ್ದಾನೆ. ಈ ವೇಳೆ ಮಹಿಳೆಯೂ ಆಯ ತಪ್ಪಿ ರೈಲಿನಿಂದ ಹಳಿಯ ಮೇಲೆ ಬಿದ್ದಿದ್ದಾರೆ.
ಈ ಕುರಿತು ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.