ಉಪ್ಪಿನಂಗಡಿ, ಆ 31 (DijiworldNews/HR): ಉಪ್ಪಿನಂಗಡಿಯ ಕೊಕ್ಕಡ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಪತಿಯೇ ಕೊಲೆಗೈದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ್ ಗೌಡ ಅವರ ಪತ್ನಿ ಮೋಹಿನಿ(36) ಮೃತರು.
ಮೋಹಿನಿ ಅವರ ಪತಿ ಗಣೇಶ ಗೌಡನಿಗೆ ಕುಡಿತದ ಚಟವಿದ್ದು ಪತ್ನಿ ಜತೆ ಜಗಳ ಉಂಟಾಗಿ ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆಗೈದ ಪರಿಣಾಮ ಮೋಹಿನಿ ಸಾವನ್ನಪ್ಪಿರುವ ಬಗ್ಗೆ ಸಂಶಯಿಸಲಾಗಿದ್ದು, ಮಹಿಳೆಯ ಅನುಮಾನಾಸ್ಪದ ಸಾವಿನ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಧರ್ಮಸ್ಥಳ ಪಿಎಸ್ಐ ಅನಿಲ್ ಕುಮಾರ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ಸಂಶಯದ ಮೇಲೆ ಗಣೇಶ ಗೌಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ದಂಪತಿಯ 6 ವರ್ಷದ ಮಗನನ್ನು ನೋಡಿಕೊಳ್ಳಲು ಕುಟುಂಬಸ್ಥರು ಯಾರೂ ಮುಂದೆ ಬಾರದ ಹಿನ್ನೆಲೆ ಮಕ್ಕಳ ಪಾಲನಾ ಕೇಂದ್ರಕ್ಕೆ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.