ಕಾಸರಗೋಡು, ಫೆ 04(SM): ಪೆರ್ಲ ಪಡ್ರೆ ಸುಂದರ ನಾಯ್ಕ(55) ರವರ ಸಾವು ಕೊಲೆ ಎಂದು ಸಾಬೀತಾಗಿದ್ದು, ಪುತ್ರ ಸೇರಿದಂತೆ ಮೂವರನ್ನು ಎಎಸ್ ಪಿ ಶಿಲ್ಪಾ ನೇತೃತ್ವದ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರನ್ನು ಸುಂದರವರ ಪುತ್ರ ಜಯಂತ(28), ಸುಂದರ ರವರ ಸಹೋದರ ಈಶ್ವರ ನಾಯ್ಕ (37) ಮತ್ತು ಈಶ್ವರ ನಾಯ್ಕ ನ ಪುತ್ರ ಪ್ರಭಾಕರ(37) ಎಂದು ಗುರುತಿಸಲಾಗಿದೆ. ಆರೋಪಿಗಳ ಬಂಧನದ ಬಳಿಕ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಜನವರಿ 20ರಂದು ರಾತ್ರಿ ಘಟನೆ ನಡೆದಿತ್ತು. ಪಾನಮತ್ತನಾಗಿ ಮನೆಗೆ ಬಂದ ಸುಂದರ ನಾಯ್ಕ ತನ್ನ ಪತ್ನಿ ಜೊತೆ ಜಗಳವಾಡಿದ್ದ. ಈ ಸಂದರ್ಭದಲ್ಲಿ ಸಮೀಪದ ಮನೆಯಿಂದ ಬಂದ ಈಶ್ವರ ಮತ್ತು ಪ್ರಭಾಕರ ಸುಂದರನನ್ನು ದೂಡಿ ಹಾಕಿ ತಲೆಗೆ ಸಲಾಕೆಯಿಂದ ಹಲ್ಲೆ ನಡೆಸಿದ್ದಾರೆ. ಪುತ್ರ ಜಯಂತ ಕೂಡಾ ಕೃತ್ಯದಲ್ಲಿ ಭಾಗಿಯಾಗಿದ್ದ.
ಬಳಿಕ ಸಂಬಂಧಿಕನೋರ್ವನ ಓಮ್ನಿ ಕಾರಿನಲ್ಲಿ ಪೆರ್ಲದ ಆಸ್ಪತ್ರೆಗೆ ಗಾಯಾಳು ಸುಂದರನನ್ನು ಕೊಂಡೊಯ್ದಿದ್ದಾರೆ. ಪರಿಸ್ಥಿತಿ ಚಿಂತಾಜನಕವಾದುದರಿಂದ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದರು. ಆದರೆ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯದೆ ಮನೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆ ಇಲ್ಲದೆ ಸುಂದರ ಮೃತಪಟ್ಟಿದ್ದಾರೆ. ಬಳಿಕ ದಿನ ಬೆಳಗಾಗುವುದರೊಳಗೆ ಅಂತ್ಯ ಕ್ರಿಯೆ ನಡೆಸಲಾಗಿದೆ.
ಸಾಕ್ಷ್ಯ ನಾಶಕ್ಕೆ ಪತ್ನಿ ಕೂಡಾ ಯತ್ನಿಸಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಸಂಶಯ ಉಂಟಾದ ಹಿನ್ನಲೆಯಲ್ಲಿ ಸುಂದರ ನಾಯ್ಕರ ಸಹೋದರ ನಾರಾಯಣ ನಾಯ್ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.
ಈ ಬಗ್ಗೆ ಬದಿಯಡ್ಕ ಪೊಲೀಸರು ತನಿಖೆ ನಡೆಸಿದ್ದು, ಫಾರೆನ್ಸಿಕ್ ತಜ್ಞರು ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು . ಆದರೆ, ಹೊಡೆದಾಟದ ಕುರುಹು ಮತ್ತು ರಕ್ತದ ಕಲೆಗಳು ಪತ್ತೆಯಾಗಿದ್ದವು.
ಈ ಮಾಹಿತಿ ಕಲೆ ಹಾಕಿದ ಪೊಲೀಸರು ಜಯಂತನನ್ನು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.