ಉಡುಪಿ, ಆ 30 (DaijiworldNews/SM): “ಕಾರ್ಯಕರ್ತರಿಗೆ ಉಡುಪಿ ಶಾಸಕರು ಮಾಡಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಹೆಮ್ಮೆ ಇದೆ. ಹೀಗಾಗಿ ಯಾರೋ ಕ್ಷುಲ್ಲಕವಾಗಿ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಟೀಕಿಸಿದಾಗ ಕಾರ್ಯಕರ್ತರಿಗೆ ಸಹಜವಾಗಿ ನೋವಾಗಿದೆ” ಎಂದು ಉಡುಪಿ ಜಿಲ್ಲಾ ಬಿಜೆಪಿ ಅದ್ಯಕ್ಷ್ಯ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಉಡುಪಿಯ ರಸ್ತೆಗಳ ಸಮಸ್ಯೆಯ ಕುರಿತು ಧ್ವನಿ ಎತ್ತಿದ ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಯುವತಿಯ ಮಾನಹಾನಿ ಮಾಡಿರುವುದು ಎಷ್ಟು ಸರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧ್ಯಕ್ಷ್ಯರು “ನಾವು 20 ವರ್ಷದ ಮೊದಲಿನ ಬಿಜೆಪಿ ಮತ್ತು ಈಗೀನ ಬಿಜೆಪಿ ನೋಡಿದಾಗ ಮತ್ತು ನಮ್ಮ ಶಾಸಕರು. ಸರಕಾರ ಬಂದ ಮೇಲೆ ಏನು ಅಭಿವೃದ್ದಿ ಆಗಿದೆ ಎಂಬುವುದನ್ನು ಗೊತ್ತಿಲ್ಲದೇ ಆ ಯುವತಿ ಮಾತನಾಡಿರಬಹುದು.
ಈ ಭಾರಿ ಮಳೆ ಅತ್ಯಂತ ಜೋರಾಗಿತ್ತು ರಸ್ತೆ ಹಾಳಾಗಿದೆ ಎಂಬುವುದನ್ನು ನಾನು ಒಪ್ಪುತ್ತೇನೆ, ಆದರೆ ಅದಕ್ಕೆ ಶಾಸಕರಿಗೆ ಫೋನ್ ಮಾಡಿ ಏನು ಪರಿಸ್ಥಿತಿ ಎಂದು ಕೇಳಬಹುದಿತ್ತು. ವಿಡಿಯೋ ಮಾಡಿ ಅಷ್ಟು ಕೀಳಾಗಿ ಮಾತನಾಡುವ ಅಗತ್ಯ ಇರಲಿಲ್ಲ. ನಮ್ಮ ಕಾರ್ಯಕರ್ತರು ನಮ್ಮ ನಾಯಕರೇ ಹೆಚ್ಚು ಕಮ್ಮಿ ಆದರೆ ಬಿಡುವವರು ಅಲ್ಲ. ಪ್ರಜಾಪ್ರಭುತ್ವದಲ್ಲಿ ಸಮಸ್ಯೆ ಬಗ್ಗೆ ಖಂಡಿತ ಮಾತನಾಡಬೇಕು. ನಾನು ಇದನ್ನು ಸಮರ್ಥನೆ ಮಾಡುತಿಲ್ಲ” ಎಂದು ಸಮಜಾಯಿಷಿ ನೀಡಿದರು.
ಉಡುಪಿಯ ಇಂದ್ರಾಳಿ ರೈಲ್ವೇ ಸೇತುವೆ ವಿಸ್ತರಣೆ ಸಮಸ್ಯೆಗೆ ನಿಮ್ಮದೇ ಸರಕಾರದ ಬಳಿ ನಿಯೋಗವೊಂದನ್ನು ಕೊಂಡು ಹೋಗಿ ಇದನ್ನು ಏಕೆ ಬಗೆಹರಿಸಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ “ಇದರ ಬಗ್ಗೆ ಈಗಾಗಲೇ ರೈಲ್ವೇ ಸಚಿವರಿಗೆ 20 ದಿನಗಳ ಹಿಂದೆ ಪತ್ರ ಬರೆದಿದ್ದೇನೆ. ಇದು ಕಾಂಟ್ರಾಕ್ಟರ್ ಸಮಸ್ಯೆ. ಕಾಂಟ್ರಾಕ್ಟರ್ ಕೋರ್ಟ್ ಗೆ ಹೋದರೆ ವರ್ಷಗಟ್ಟಲೆ ಕೆಲಸ ನಿಲ್ಲುತ್ತದೆ. ಪರ್ಕಳ ರಸ್ತೆಯಲ್ಲಿ ಪ್ರತಿದಿನ ಲಾರಿ ಮತ್ತಿತರ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಕೇವಲ ಎರಡು ದಿನಗಳ ಮಟ್ಟಿಗೆ ಪ್ಯಾಚ್ ವರ್ಕ್ ಮಾಡಬೇಕಾಗುತ್ತದೆ, ಮಳೆ ಬಂದ ಕೂಡಲೇ ಅದು ಕಿತ್ತು ಬರುತ್ತದೆ. ಪರ್ಕಳದಲ್ಲಿ ಕಾಂಕ್ರೀಟ್ ಮಾಡಲು ಕೂಡಾ ಅವಕಾಶ ಇಲ್ಲ. ವೆಟ್ ಮಿಕ್ಸ್ ಒಂದು ಮಳೆಗೆ ಮಾತ್ರ ನಿಲ್ಲುತ್ತೆ. ಈಗ ಯಾವ ಕಾಂಟ್ರಾಕ್ಟರ್ ಬಳಿ ಕೂಡಾ ಪ್ಲಾಂಟ್ ಇಲ್ಲ. ಡಾಮಾರ್ ಪ್ಲಾಂಟ್ ಆರಂಭ ಆಗುವುದು ಇನ್ನು ಅಕ್ಟೋಬರ್ ಬಳಿಕವೇ” ಎಂದು ಪ್ರತಿಕ್ರಿಯಿಸಿದರು.