ಉಡುಪಿ, ಆ 30 (DaijiworldNews/HR): ಇತ್ತೀಚಿಗೆ ನಗರಸಭೆಯ ಸದಸ್ಯರಾದ ಅಮೃತ ಕೃಷ್ಣಮೂರ್ತಿಯವರ ವಾರ್ಡಿನ ವ್ಯಾಪ್ತಿಯಲ್ಲಿ, ಕಿನ್ನಿಮೂಲ್ಕಿ ಗೋಪುರದ ಬಳಿ ಮೀನು ಮಾರಾಟ ನಡೆಸುತ್ತಿದ್ದ ಮಹಿಳೆಯರಿಗೆ ತನ್ನ ಸ್ವಂತ ಖರ್ಚಿನಿಂದ ಶೆಡ್ ಕಟ್ಟಿದಾಗ, ನಿರ್ಮಾಣ ಹಂತದಲ್ಲೇ ಅಕ್ರಮ ಕಟ್ಟಡ ಎಂದು ಕಮಿಷನರ್ ಆದೇಶದಂತೆ ನಗರಸಭೆಯ ಇಂಜಿನಿಯರ್ ಕೆಡವಲಾಗಿದ್ದು, ಈ ಬಗ್ಗೆ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ, ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ನಗರಸಭೆಯ ಆಡಳಿತ ಮತ್ತು ವಿಪಕ್ಷದ ಸದಸ್ಯರೊಳಗೆ ವಾದ ವಿವಾದ ನಡೆಯಿತು.
ಅಮೃತ ಕೃಷ್ಣಮೂರ್ತಿ ಅಭಿಪ್ರಾಯ ಹೇಳಲು ಏಳುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಆಗಸ್ಟ್ 26ರಂದು ತೆಗೆದ ಫೋಟೋಗಳನ್ನ ತೋರಿಸಿ ಸದಸ್ಯೆ ಮೇಲೆ ಮುಗಿ ಬಿದ್ದರು.
ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದ ನಗರಸಭೆಯ ಸದಸ್ಯ ದೇವಿದಾಸ್ ಶೆಟ್ಟಿಗಾರ್ ಕಡೆಕಾರ್ ಪಂಚಾಯತ್ ನ ವ್ಯಾಪ್ತಿಗೆ ಆ ಜಾಗ ಒಳಪಟ್ಟಿದ್ದು, ಅನೇಕ ವರ್ಷಗಳಿಂದಲೂ ಮೀನುಗಾರ ಮಹಿಳೆಯರು ಅಲ್ಲೇ ಇದ್ದಾರೆ. ಅಕ್ರಮ ಶೆಡ್ ನ್ನು ಕೆಡವಲು ಹೋದ ಇಂಜಿನಿಯರ್ ಗೆ ಅಗೌರವ ತೋರಿದ್ದು, ಸಾರ್ವಜನಿಕರು ಅಧಿಕಾರಿಯನ್ನ ಬೆದರಿಸಿದ್ದಾರೆ, ಇಂತಹ ವರ್ತನೆ ಖಂಡನೀಯ ಎಂದಿದ್ದಾರೆ.
ಕೌನ್ಸಿಲರ್ ಅಮೃತ ಕೃಷ್ಣಮೂರ್ತಿ ಹಲವಾರು ವರ್ಷದಿಂದ ಒಂದು ಸರಿಯಾದ ಸೂರು ಇಲ್ಲದೆ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರಿಗೆ ಮಾನವೀಯ ನೆಲೆಯಲ್ಲಿ ಒಂದು ಶೆಡ್ ಕಟ್ಟಲು ಹೊರಟಿದ್ದೆ. ಏನೂ ಸೂಚನೆ ಇಲ್ಲದೆ ಏಕಾಏಕಿ ಬಂದು ಕೆಡವುದಕ್ಕಿಂತ ನೋಟಿಸ್ ಕೊಡಬಹುದಿತ್ತು. ಆಗ ನಾವೇ ಕ್ರಮ ತೆಗೆದು ಕೊಳ್ಳುತ್ತಿದ್ದೆವು. ಇದರ ಹಿಂದೆ ಯಾವ ಯಾವ ರಾಜಕೀಯ ದುರುದ್ದೇಶ ಇಲ್ಲ. ಯಾರ ಒಲವು ಗಿಟ್ಟಿಸುವ ಅವಶ್ಯಕತೆ ಇಲ್ಲ ಎಂದು ಕಮಿಷನರ್ ಗೆ ತಿಳಿಸಿದರು.
ಇದಕ್ಕೆ ಸ್ಪಷ್ಟನೇ ನೀಡಿದ ಕಮಿಷನರ್ ಉದಯ್ ಕುಮಾರ್, ಅನಧಿಕೃತ ಕಟ್ಟಡದ ತೆರವಿಗೆ ಯಾವುದೇ ನೋಟಿಸ್ ಕೊಡುವ ಪ್ರಕ್ರಿಯೆ ಇಲ್ಲ. ಅದು ಕೂಡ ಕಟ್ಟಡವನು ಸರಕಾರಿ ಜಾಗದಲ್ಲಿ ಕಟ್ಟಲಾಗಿದೆ. ಸರಕಾರಿ ಅಧಿಕಾರಿಯ ಮೇಲೆ ಅಗೌರವ ತೋರಿದ್ದು ಅತ್ಯಂತ ದುಃಖಕರ, ಇಂತಹ ಘಟನೆ ಹಿಂದೆ ನಡೆದಿಲ್ಲ ಎಂದು ಹೇಳಿದರು.
ನಗರಸಭೆಯಲ್ಲಿ ಬ್ರೋಕರ್ ಗಳ ದರ್ಪ ಹೆಚ್ಚಾಗಿದೆ, ಬ್ರೋಕರ್ ಗಳು ಬಂದರೆ ಮಾತ್ರ ಇಲ್ಲಿ ಕೆಲಸ ನಡೆಯುತ್ತದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳು ಬ್ರೋಕರ್ ಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಸದಸ್ಯ ಪ್ರಭಾಕರ್ ಪೂಜಾರಿ ಹೇಳಿದರು.
ಇದಕ್ಕೆ ಉತ್ತರಿಸಿದ ಉತ್ತರಿಸಿದ ಶಾಸಕ ರಘುಪತಿ ಭಟ್, ನಗರಸಭೆಗೂ ಬ್ರೋಕರ್ ಗಳು ವ್ಯವಹಾರ ಆರಂಭವಾದರೆ ನಗರಸಭೆಗೆ ಕೆಟ್ಟ ಹೆಸರು, ಇನ್ಮುಂದೆ ನಗರಸಭೆಯಲ್ಲಿ ಬ್ರೋಕರ್ ಗಳು ಕಂಡು ಬಂದಲ್ಲಿ ಅಧಿಕಾರಿಗಳು ಇದಕ್ಕೆ ಪ್ರೋತ್ಸಾಹ ನೀಡಿದರೆ ಅವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದರು.
ಹಿಂದೂ ಜಾಗರಣ ವೇದಿಕೆಯ ಬ್ರಹ್ಮಗಿರಿ ಸರ್ಕಲ್ ನಲ್ಲಿ ಪುತ್ಥಳಿ ನಿರ್ಮಾಣಕ್ಕೆ ಬೇಡಿಕೆ ಇಟ್ಟು ನಗರಸಭೆಯಲ್ಲಿ ಅನುಮೋದನೆಗೆ ಒತ್ತಾಯಿಸಿದ ಹಿನ್ನೆಲೆ, ಸ್ಪಷ್ಟನೆ ನೀಡಿದ ರಘುಪತಿ ಭಟ್, ಬ್ರಹ್ಮಗಿರಿ ಸರ್ಕಲ್ ಗೆ ಈಗಾಗಲೆ ಆಸ್ಕರ್ ಫೆರ್ನಾಂಡಿಸ್ -ಅಷ್ವಿನಿ ಶೆಟ್ಟಿ ವೃತ್ತ ಎಂದು ಅಂತಿಮ ಮಾಡಿದ್ದೂ, ಸರಕಾರದ ಅನುಮೋದನೆಗೆ ಕಳುಹಿಸಲಾಗಿದೆ. ಯಾವುದೇ ಮೂರ್ತಿ ನಿರ್ಮಾಣಕ್ಕೆ ಅವಕಾಶ ಇಲ್ಲ. ಹಾಗಾಗಿ ಉಡುಪಿ ಹೃದಯ ಭಾಗದ ಜಿಲ್ಲಾ ನ್ಯಾಯಾಲಯದ ಬಳಿ ಸಾವರ್ಕರ್ ಸರ್ಕಲ್ ನಿರ್ಮಾಣಕ್ಕೆ ನಗರಸಭೆ ಒಪ್ಪಿಗೆ ನೀಡಲಾಯಿತು. ನಗರಸಭೆಯ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ ಮಾಡಲಾಯಿತು. ಈ ಬಗ್ಗೆ ಹಿಂದೂ ಮಹಾಸಭಾ, ಜಾಗರಣಾ ನಾಯಕರಿಗೆ ಮನವರಿಕೆ ಮಾಡುತ್ತೇನೆ, ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಶಾಸಕ ಭಟ್ ಹೇಳಿದರು.
ಈ ವೇಳೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜು ಸಾಲ್ಯಾನ್ ಉಪಸ್ಥಿತರಿದ್ದರು.