ಕಾಸರಗೋಡು, ಆ 30 (DaijiworldNews/HR): ಸುಮಾರು ಒಂದು ಕೋಟಿ ರೂ. ಮೌಲ್ಯದ ವಿದೇಶಿ ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಚಟ್ಟಂಚಾಲ್ ಹಯರ್ ಸೆಕಂಡರಿ ಶಾಲಾ ಮೈದಾನದೊಳಗೆ ನುಗ್ಗಿಸಿ ಭಯದ ವಾತಾವರಣವನ್ನುಂಟು ಮಾಡಿದ ಘಟನೆ ಚಟ್ಟಂಚಾಲ್ ನಲ್ಲಿ ನಡೆದಿದ್ದು, ಕಾರನ್ನು ವಶಕ್ಕೆ ಪಡೆದಿರುವ ಮೇಲ್ಪರಂಬ ಠಾಣಾ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಾರ್ಜಾ ನೋಂದಣಿಯ ಈ ಕಾರು ಶಾಲಾ ಮೈದಾನದೊಳಗೆ ಅತಿಕ್ರಮಿಸಿ ಮೈದಾನದಲ್ಲಿ ರೇಸ್ ನಡೆಸಿದ್ದು, ಅತೀ ವೇಗ, ಕರ್ಕಶ ಹಾರ್ನ್ನಿಂದ ಕಾರನ್ನು ಚಲಾಯಿಸಿದ್ದು, ಇದರಿಂದ ಶಾಲಾ ತರಗತಿಗೂ ಅಡ್ಡಿಯಾಗಿದ್ದು, ವಿದ್ಯಾರ್ಥಿಗಳಲ್ಲಿ ಭಯವನ್ನುಂಟು ಮಾಡುವ ರೀತಿಯಲ್ಲಿ ರೇಸ್ ನಡೆಸಲಾಗಿತ್ತು.
ಈ ಬಗ್ಗೆ ಶಾಲಾ ಪ್ರಾಂಶುಪಾಲ ಟೋಮಿ ಎಂ.ಜೆ ಮೇಲ್ಪರಂಬ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡಿದ್ದು, ಕಾರಿನಲ್ಲಿದ್ದ ಮೂವರ ವಿರುದ್ಧ ಪ್ರಕರಣ ಧಾಖಲಿಸಿಕೊಂಡಿದ್ದಾರೆ.
ಈ ವಿದೇಶಿ ನಿರ್ಮಿತ ಕಾರಿನ ನೋಂದಣಿ, ಭಾರತದಲ್ಲಿ ಸಂಚರಿಸಲಿರುವ ಪರವಾನಿಗೆ ಮೊದಲಾದವುಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ಪೊಲೀಸರು ನಿರ್ದೇಶನ ನೀಡಿದ್ದಾರೆ.
ಇನ್ನು ಈ ನಡುವೆ ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಶಾಲಾ ಪರಿಸರಗಳಲ್ಲಿ ಕಟ್ಟು ನಿಟ್ಟಿನ ವಾಹನ ತಪಾಸಣೆ ನಡೆಸುವಂತೆ ಮಕ್ಕಳನ್ನು ಆಕರ್ಷಿಸಲು ವಾಹನಗಳಲ್ಲಿ ಸುತ್ತಾಡುವ ವಾಹನಗಳನ್ನು ವಶಕ್ಕೆ ಪಡೆಯಲು ಕ್ರಮ ತೆಗೆದುಕೊಂಡಿರುವುದಾಗಿ ಮೇಲ್ಪರಂಬ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಟಿ. ಉತ್ತಮ ದಾಸ್ ತಿಳಿಸಿದ್ದಾರೆ.