ಮೈಸೂರು, ಫೆ 04(SM): ಬಾಲಕಿಯನ್ನು ಅಪಹರಣಗೈದು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಮಂಗಳೂರು ಮೂಲದ ಮೂವರು ಪಾದ್ರಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮೈಸೂರಿನ ನರಸಿಂಹ ರಾಜ್ ಮೊಹಲ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಬಾಲಕಿಗೆ ಉದ್ಯೋಗ ಹಾಗೂ ಆಕೆಯ ತಾಯಿಗೆ ಮನೆ ಕಟ್ಟಲು ನೆರವು ನೀಡುವುದಾಗಿ ಭರವಸೆ ನೀಡಿ ದೌರ್ಜನ್ಯ ಎಸಗಲಾಗಿದೆ ಎಂಬುವುದು ತಾಯಿಯ ಆರೋಪ. ಆರೋಪ ಎದುರಿಸುತ್ತಿರುವ ಪಾದ್ರಿಗಳು ಮಂಗಳೂರಿನ ಬಲ್ಮಠ ಮೂಲದವರಾಗಿದ್ದು, ಸೆಬಸ್ಟಿಯನ್, ಜೊಶ್ವಾ ಅಮನ್ ಮತ್ತು ಬೆನ್ನೆಟ್ ಅಮನ್ ಎಂದು ಗುರುತಿಸಲಾದೆ.
೨೦೧೮ರ ನವಂಬರ್ ತಿಂಗಳಲ್ಲಿ ಆರೋಪ ಎದುರಿಸುತ್ತಿರುವ ಪಾದ್ರಿಗಳು ಬಾಲಕಿಯನ್ನು ಮಂಗಳೂರಿನ ನರ್ಸಿಂಗ್ ಹೋಂವೊಂದರಲ್ಲಿ ಉದ್ಯೋಗ ನೀಡುವುದಾಗಿ ಕರೆದುಕೊಂಡು ತೆರಳಿದ್ದರು. ಅಲ್ಲದೆ ಆಕೆಗೆ ನೂತನ ಮನೆ ನಿರ್ಮಾಣಕ್ಕೆ ೧ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು. ಬಾಲಕಿಯನ್ನು ಕರೆದೊಯ್ದ ಪಾದ್ರಿಗಳು ಆಕೆಯನ್ನು ತಮ್ಮ ಗೃಹ ಬಂಧನದಲ್ಲಿರಿಸಿದ್ದರು. ಹಾಗೂ ಡಿಸೆಂಬರ್ ತಿಂಗಳಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂಬುವುದು ಆಕೆಯ ತಾಯಿಯ ಆರೋಪ. ಅಲ್ಲದೆ ಈ ವಿಚಾರಗಳನ್ನು ಯಾರಿಗೂ ತಿಳಿಸಬಾರದೆಂದು ಬೆದರಿಕೆಯನ್ನು ಕೂಡ ಹಾಕಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಬಾಲಕಿಯ ತಾಯಿ ವಿವರಿಸಿದ್ದಾರೆ.
ಸದ್ಯ ಬಾಲಕಿಯ ತಾಯಿ ಸ್ವಯಂಸೇವಾ ಸಂಘಟನೆ ಮೂಲಕ ಪಾದ್ರಿಗಳ ವಿರುದ್ಧ ಹೈಕೋರ್ಟ್ ನಲ್ಲಿ ದೂರು ನೀಡಿದ್ದಾರೆ. ಆಕೆಯ ದೂರಿನಂತೆ ಪಾದ್ರಿಗಳ ವಿರುದ್ಧ ಕೇಸು ದಾಖಲಿಸಿ ತನಿಖೆ ಆರಂಭಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪ ಎದುರಿಸುತ್ತಿರುವವರು ತಲೆ ಮರೆಸಿಕೊಂಡಿದ್ದಾರೆ.
ಸದ್ಯ ಪೊಲೀಸರು ಮೂವರ ಪತ್ತೆಗೆ ಶೋಧಕಾರ್ಯ ಆರಂಭಿಸಿದ್ದಾರೆ.