ಕಾರ್ಕಳ, ಆ 30 (DaijiworldNews/MS): ಕರ್ನಾಟಕ ಯಕ್ಷಗಾನ ಅಕಾಡೆಮಿಯು 2022ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೋಷಿಸಿದ್ದು, ಕಾರ್ಕಳದ ದಾನಶಾಲೆಯ ನಿವಾಸಿ ಅಜಿತ್ ಕುಮಾರ್ ಜೈನ್ ಅವರು ಯಕ್ಷಸಿರಿ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ತೆಂಕತಿಟ್ಟು ಯಕ್ಷಗಾನ ಕಲಾವಿದರು, ಯಕ್ಷಗಾನದ ಗುರುಗಳಾಗಿರುವ ಅಜಿತ್ ಕುಮಾರ್ ಜೈನ್, 5ನೇ ತರಗತಿ ಓದುತ್ತಿರುವಾಗ ಯಕ್ಷಗಾನ ಆಸಕ್ತಿ ಬೆಳೆಸಿಕೊಂಡಿದ್ದರು.
ಕಾರ್ಕಳ ಅನಂತಪದ್ಮನಾಭ ದೇವಸ್ಥಾನದಲ್ಲಿದ್ದ ಅನಂತ ಪದ್ಮನಾಭ ಯಕ್ಷಗಾನ ಮಂಡಳಿಯಲ್ಲಿ ಯಕ್ಷಗಾನ ತರಬೇತಿಯನ್ನು ಮುಂಡಾಜೆಯ ಸದಾಶಿವ ಶೆಟ್ಟಿ ಅವರಿಂದ ಪಡೆದಿದ್ದರು. ಅನಂತರ ಪೆರ್ಡೂರು ಸಮೀಪದ ಬುಕ್ಕಿಗುಡ್ಡೆ ಜಯಂತ ನಾಯ್ಕ ಅವರಲ್ಲಿ ಬಡಗುತಿಟ್ಟು ಅಭ್ಯಾಸ ಮಾಡಿದರು.
1974ರಿಂದ ಹವ್ಯಾಸಿ ರಂಗ ಕಲಾವಿದರಾಗಿ ರಂಗವೇರಿದ ಇವರು ಕಾರ್ಕಳ ಮಹಾಮ್ಮಯಿ ಯಕ್ಷಗಾನ ಸಂಘದಲ್ಲಿ ಕಳೆದ 50 ವರ್ಷಗಳಿಂದ ಹವ್ಯಾಸ ಕಲಾವಿದರಾಗಿದ್ದಾರೆ.
ಕೋಲುಕಿರೀಟ, ಹೆಣ್ಣುಬಣ್ಣ, ಕಿರಾತಕ ಮೊದಲಾದ ವೇಷಗಳಲ್ಲಿ ಮಿಂಚದ ಇವರು ಅರ್ಜುನ, ದೇವೇಂದ್ರ, ಕಾರ್ತವೀರ್ಯ, ಶೂರ್ಪನಖಿ,ತಾಟಕಿ, ಪೂತನಿ, ಪ್ರೇತ ಮೊದಲಾದ ಪಾತ್ರಗಳಿಂದ ಮೆಚ್ಚುಗೆ ಪಡೆದಿದ್ದಾರೆ. 1978ರಿಂದ ಯಕ್ಷಗಾನ ತರಬೇತಿಯನ್ನು ನೀಡುತ್ತಾ ಬಂದಿರುವ ಇವರು ಮಕ್ಕಳಿಗೆ ಯಕ್ಷಪ್ರಪಂಚವನ್ನು ಪರಿಚಯಿಸಿದ್ದಾರೆ.
1978ರಿಂದ ಎಸ್ವಿಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾ ಸಂಸ್ಥೆಗಳ ಮಕ್ಕಳಿಗೆ ತರಬೇತಿ ನೀಡುತ್ತಾ ಬಂದಿದ್ದಾರೆ.
1985ರಿಂದ 10 ವರ್ಷ ಯಕ್ಷಗಾನ ಬಾಲವೃಂದ ಎಂಬ ತರಬೇತಿ ಕೇಂದ್ರ ಹುಟ್ಟು ಹಾಕಿ 10 ವರ್ಷಗಳ ಕಾಲ ಆಸಕ್ತ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಿದ್ದಾರೆ.
ಮಕ್ಕಳಿಗೆ ಪಾರಂಪರಿಕ ತೆಂಕುತಿಟ್ಟಿನ ತರಬೇತಿ ನೀಡುತ್ತಿದ್ದಾರೆ. ಪೌರಣಿಕ ಕತೆಗಳನ್ನು ಆಯ್ದು ಮಕ್ಕಳಿಗೆ ತರಬೇತು ಗೊಳಿಸುತ್ತಿದ್ದಾರೆ. ಇವರು ಎಸ್ವಿಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ 2012ರಲ್ಲಿ ನಿವೃತ್ತರಾದರೂ, ಈಗಲೂ ಸಂಸ್ಥೆಯಲ್ಲಿ ಮಕ್ಕಳಿಗೆ ತರಭೇತಿ ನೀಡುತ್ತಿದ್ದಾರೆ.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿರುವ ಇವರು ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.
"ಯಕ್ಷಗಾನ ಅಕಾಡೆಮಿ ವತಿಯಂದ ಕಾರ್ಕಳ ತಾಲೂಕು ಮಟ್ಟದಲ್ಲಿ ಸನ್ಮಾನಿತರಾಗಿದ್ದಾರೆ. ಪಟ್ಲ ಪೌಂಡೇಶನ್ನಿಂದ ಗೌರವ ಸಂಧಿದೆ. ಪ್ರಶಸ್ತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಮಕ್ಕಳಲ್ಲಿ ಯಕ್ಷಗಾನ ಕಲೆಯನ್ನು ಪಸರಿಸುವ ಕಾಳಜಿಯನ್ನು ಗುರುತಿಸಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸವನ್ನುಂಟು ಮಾಡಿದೆ". -ಅಜಿತ್ ಕುಮಾರ್ ಜೈನ್