ಮಂಗಳೂರು, ಆ 29 (DaijiworldNews/SM): ಕರಾವಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಭರದ ಸಿದ್ಧತೆ ಆರಂಭಗೊಂಡಿದೆ. ನಗರ ಹೊರವಲಯದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸೆ. 2ರಂದು ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಅಲ್ಲದೆ, ಮತ್ತೊಂದೆಡೆ ರಸ್ತೆ ದುರಸ್ಥಿ ಕಾರ್ಯ ಮುಂದುವರಿದೆ.
ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವುದರಿಂದ ಮಂಗಳೂರು ನಗರ ಮತ್ತು ಹೊರವಲಯದಲ್ಲಿ ಬಿಗು ಬಂದೋಬಸ್ತ್ ನಡೆಸಲಾಗುತ್ತಿದೆ. ರವಿವಾರದಿಂದಲೇ ಪೊಲೀಸರು ವಾಹನಗಳ ತಪಾಸಣೆ ನಡೆಸಲು ಆರಂಭಿಸಿದೆ. ಸಮುದ್ರ ತೀರದಲ್ಲೂ ಗಸ್ತು ಆರಂಭಿಸಲಾಗಿದ್ದು, ಕರಾವಳಿ ಕಾವಲು ಪಡೆ ಕಣ್ಗಾವಲು ನಡೆಸುತ್ತಿದೆ.
ಈಗಾಗಲೆ ಬಂಗ್ರಕೂಳೂರಿನಲ್ಲಿ ಸಿದ್ಧತೆ ಕಾರ್ಯ ಭರದಿಂದ ನಡೆಯುತ್ತಿವೆ. ಈ ಮಧ್ಯೆ ಬಿಜೆಪಿಯು ಇದನ್ನು ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಈ ನಡುವೆ ರಸ್ತೆಗಳ ಅಭಿವೃದ್ಧಿ, ಹೊಂಡಗುಂಡಿಗಳನ್ನು ಮುಚ್ಚುವ ಕಾರ್ಯಗಳು ಪ್ರಗತಿಯಲ್ಲಿವೆ. ಪ್ರಮುಖವಾಗಿ ಕೂಳೂರು ಬ್ರಿಡ್ಜ್ ಗಳಲ್ಲಿ ಹೊಂಡ ಗುಂಡಿಗಳನ್ನು ಮುಚ್ಚುವ ಕಾರ್ಯಗಳನ್ನು ನಡೆಸಲಾಗಿದೆ.