ಮಂಗಳೂರು, ಆ 29 (DaijiworldNews/SM): ಸ್ವಾತಂತ್ರ್ಯ ಹೋರಾಟಗಾರ ಅಮರ ಸುಳ್ಯ ದಂಗೆಯ ನಾಯಕ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಯನ್ನು ನಗರದ ಬಾವುಟಗುಡ್ಡೆಯಲ್ಲಿ ಪ್ರತಿಷ್ಟಾಪಿಸಲು ಸಿದ್ಧತೆ ನಡೆದಿದ್ದು, ಕಂಚಿನ ಪ್ರತಿಮೆಯನ್ನು ಕರಾವಳಿಗೆ ಇಂದು ತರಲಾಗಿದೆ.
ನಗರದ ಬಾವುಟಗುಡ್ಡದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಅಮರ ಸುಳ್ಯ ದಂಗೆಯ ನಾಯಕ ಕೆದಂಬಾಡಿ ರಾಮಯ್ಯ ಗೌಡ ಅವರ ಕಂಚಿನ ಪ್ರತಿಮೆಗೆ ಕರಾವಳಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಗಿದೆ. ಸೋಮವಾರ ಬೆಳಗ್ಗೆ ಸುಳ್ಯದ ಮೂಲಕ ಕರಾವಳಿ ಪ್ರವೇಶಿಸಿದ ಸಂದರ್ಭದಲ್ಲಿ ಸುಳ್ಯದಲ್ಲಿ ಪ್ರತಿಮೆಗೆ ಭವ್ಯ ಸ್ವಾಗತ ಕೋರಲಾಗಿತ್ತು. ಬಳಿಕ ಪುತ್ತೂರು, ಬಂಟ್ವಾಳಗಳಲ್ಲೂ ಅದ್ದೂರಿ ಸ್ವಾಗತ ಕೋರಿ ಅಂತಿಮವಾಗಿ ಮಂಗಳೂರು ತಲುಪಿದೆ. ಸೋಮವಾರ ಸಂಜೆ ರಾ.ಹೆ.66ರ ಪಡೀಲ್ ಮೂಲಕ ಮಂಗಳೂರು ನಗರ ಪ್ರವೇಶಿಸಿತು.
ಪಡೀಲ್ ಜಂಕ್ಷನ್ನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಿದರು. ಈ ಸಂದರ್ಭ ಶಾಸಕರಾದ ಸಂಜೀವ ಮಠಂದೂರು, ಹರೀಶ್ ಪೂಂಜಾ, ಸ್ಮಾರಕ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಬುಡ್ಲೆ ಗುತ್ತು, ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಘವೇಂದ್ರ ಪಿ.ಡಿ., ಕೋಶಾಧಿಕಾರಿ ಶಿವರಾಂ ನಿನ್ನಿಕಲ್ ಮತ್ತಿತರರು ಉಪಸ್ಥಿತರಿದ್ದರು.