ಮಂಗಳೂರು, ಆ 29 (DaijiworldNews/SM): ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿರುದ್ಧ ರಾಗಿ ಕಳ್ಳ ಎಂದು ಬಿಜೆಪಿ ನಾಯಕರು ಆರೋಪ ಮಾಡಿದ್ದು, ತಮ್ಮ ಮೇಲೆ ಮಾಡಿರುವ ಆರೋಪ ನಿರಾದಾರ ಎಂದು ದೇವರ ಮೇಲೆ ಆಣೆ ಮಾಡಲು ಕೆ.ಎಂ. ಶಿವಲಿಂಗೇಗೌಡ ತಮ್ಮ ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಆಗಮಿಸಿ ಸತ್ಯ ಪ್ರಮಾಣ ಮಾಡಿದ್ದಾರೆ.
ಆಗಸ್ಟ್ 8ರಂದು ಅರಸೀಕೆರೆಯಲ್ಲಿ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧ ರಾಗಿ ಕಳ್ಳ ಎಂದು ಆರೋಪ ಮಾಡಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಬಿಜೆಪಿ ಎಂಎಲ್ಸಿ ರವಿಕುಮಾರ್, ಶಿವಲಿಂಗೇಗೌಡರನ್ನು ರಾಗಿ ಕಳ್ಳ, ಸಿಮೆಂಟ್ ಕಳ್ಳ, ಕಬ್ಬಿಣ ಕಳ್ಳ ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಆಗಸ್ಟ್ 22ರಂದು ಕೆ.ಎಂ.ಶಿವಲಿಂಗೇಗೌಡರು ಅರಸೀಕೆರೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.
ನಾನು ಒಂದು ಕೆಜಿ ರಾಗಿ ಕಳ್ಳತನ ಮಾಡಿಲ್ಲ. ಮಾಡಿದ್ದರೆ ದಾಖಲೆ ಸಮೇತ ಸಾಬೀತು ಮಾಡಲಿ. ಇಲ್ಲವಾದರೆ ಧರ್ಮಸ್ಥಳಕ್ಕೆ ಬನ್ನಿ ದೇವರ ಮೇಲೆ ಆಣೆ ಮಾಡೋಣ ಎಂದು ಸವಾಲು ಹಾಕಿದ್ದರು. ಬಿಜೆಪಿ ನಾಯಕರು ಬಾರದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅರಸೀಕೆರೆಯ ಮೈಸೂರು ರಸ್ತೆಯಿಂದ ನೂರಾರು ವಾಹನಗಳಲ್ಲಿ ತಮ್ಮ ಅಪಾರ ಬೆಂಬಲಿಗರು ಹಾಗೂ ಅಭಿಮಾನಿಗಳ ಜೊತೆ ಕೆ. ಎಂ. ಶಿವಲಿಂಗೇಗೌಡ ಧರ್ಮಸ್ಥಳಕ್ಕೆ ಆಗಮಿಸಿದ್ದಾರೆ. ಶಾಸಕರ ತಂಡ ಅರಸೀಕೆರೆ, ಬಾಣಾವರ, ಬೇಲೂರು, ಮೂಡಿಗೆರೆ ಮಾರ್ಗವಾಗಿ ಧರ್ಮಸ್ಥಳ ತಲುಪಲಿದ್ದು, ತಮ್ಮ ಮೇಲೆ ಬಿಜೆಪಿ ನಾಯಕರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ದೇವರ ಮೇಲೆ ಆಣೆ ಮಾಡಿ ವಾಪಾಸ್ಸಾಗಿದ್ದಾರೆ.
ರಾಗಿ ಕಳ್ಳ ಎಂದು ಆರೋಪಿಸಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ನಾನು ಒಂದು ಹಿಡಿ ರಾಗಿಯನ್ನೂ ಕದ್ದಿಲ್ಲ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಿದ್ದೇನೆ ಎಂದು ಶಾಸಕರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.