ಸುಳ್ಯ, ಆ 29 (DaijiworldNews/HR): ಮಂಗಳೂರಿನ ಬಾವುಟಗುಡ್ಡೆಯಲ್ಲಿ ಸ್ಥಾಪನೆಗೊಳ್ಳಲಿರುವ ಸಂಘಟನಾ ಚತುರ, ಸ್ವಾತಂತ್ರ್ಯ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಗೆ ಸುಳ್ಯ ತಾಲೂಕಿನಾದ್ಯಂತ ಅದ್ಧೂರಿಯಾಗಿ ಪೂರ್ಣಕುಂಭ ಸ್ವಾಗತ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ(ರಿ) ಮಂಗಳೂರು ದಕ್ಷಿಣ ಕನ್ನಡ ಹಾಗೂ ವಿವಿಧ ಸಂಘ- ಸಂಸ್ಥೆ, ಸ್ಥಳೀಯಾಡಳಿತ ಸಹಯೋಗದೊಂದಿಗೆ ಪ್ರತಿಮೆಗೆ ಅದ್ಧೂರಿ ಪೂರ್ಣಕುಂಭ ಸ್ವಾಗತ ಮಾಡಲಾಯಿತು.
ಸುಳ್ಯದ ಸಂಪಾಜೆಯಲ್ಲಿ ಕೊಡಗಿನಿಂದ ಆಗಮಿಸಿದ ಪ್ರತಿಮೆ ಜಿಲ್ಲೆಯ ವತಿಯಿಂದ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಬಳಿಕ ಸುಳ್ಯಕ್ಕೆ ಆಗಮಿಸಿದ ಪ್ರತಿಮೆಗೆ ಸುಳ್ಯದ ಪರಿವಾರಕಾನದ ಬಳಿಕ ಸೇರಿದ ಜನರು ಅದ್ಧೂರಿಯಾಗಿ ಸ್ವಾಗತಿಸಿ, ಹೂವಿನ ಮಾಲೆ, ಪುಷ್ಪಾರ್ಚನೆ ಗೈದರು. ಬಳಿಕ ನಗರದ ಖಾಸಗಿ ಬಸ್ ನಿಲ್ದಾಣದ ವರೆಗೆ ಮರವಣಿಗೆ ಜಾಥ ಬಂದು ಅಲ್ಲಿ ಕಾರ್ಯಕ್ರಮ ನಡೆಸಲಾಯಿತು.
ದ್ವೀಚಕ್ರ, ನಾಲ್ಕು ಚಕ್ರಗಳ ವಾಹನಗಳು, ಆಕರ್ಷನೀಯ ಸಿಂಗಾರಿ ಮೇಳ, ಹುಲಿ ಕುಣಿತ, ಚೆಂಡೆ, ಬ್ಯಾಂಡ್, ಕೀಲ್ ಕುದುರೆ, ಗೊಂಬೆ ಕುಣಿತ, ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ಧಚಿತ್ರ ಜಾಥದುದ್ದಕ್ಕೂ ಭಾಗವಹಿಸಿತ್ತು. ಮಹಿಳೆಯರು ಕಲಶ ಹಿಡಿದು ಮೆರವಣಿಗೆ ಸ್ವಾಗತ ಕೋರಿದ್ದರು. ಸುಳ್ಯದ ಪರಿವಾರಕಾನದಿಂದ ನಗರದಾದ್ಯಂತ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯ ಜನರು ಭಾಗವಹಿಸಿದ್ದರು. ಸುಳ್ಯ ನಗರದ ಖಾಸಗಿ ಬಸ್ನಿಲ್ದಾಣದಲ್ಲಿ ಸುಳ್ಯದ ನೆಹರು ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಗಳು ಅಮರಸುಳ್ಯ ಸ್ವಾತಂತ್ರ್ಯ ಹೋರಾಟದ ಕಿರು ನಾಟಕ ಪ್ರರ್ಶಿಸಿದರು. ಬಸ್ ನಿಲ್ದಾಣದಲ್ಲಿ ಅಮರ ಸುಳ್ಯ ಸ್ವಾತಂತ್ರ್ಯದ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಬಸ್ ನಿಲ್ದಾಣದಲ್ಲಿ ಗಣ್ಯರಿಗೆ ಸ್ವಾಗತ ಮಾಡಲಾಯಿತು.
ಬಲೂನು, ಪರಿವಾಳವನ್ನು ಆಕಾಶಕ್ಕೆ ಹಾರಿ ಬಿಟ್ಟು ಪ್ರತಿಮೆಯನ್ನು ಸುಳ್ಯದಿಂದ ಬೀಳ್ಕೊಡಲಾಯಿತು. ಈ ವೇಳೆ ಕಿರಣ್ ಬುಡ್ಲೆಗುತ್ತು, ಪುನೀತ್ ಅವರನ್ನು ಗೌರವಿಸಲಾಯಿತು.
ಮೀನುಗಾರಿಕೆ ಸಚಿವ ಎಸ್.ಅಂಗಾರ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಪೀಠಾಧಿಪತಿ ಧರ್ಮಪಾಲನಾಥ ಸ್ವಾಮೀಜಿ, ಸುಳ್ಯ ಚರ್ಚ್ನ ಧರ್ಮಗುರು ರೆ.ಫಾ.ವಿಕ್ಟರ್ ಡಿಸೋಜಾ, ಶಾಫಿ ದಾರಿಮಿ ಅಜ್ಜಾವರ, ತಹಶೀಲ್ದಾರ್ ಅನಿತಾಲಕ್ಷ್ಮೀ, ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ., ರಕ್ಷಿತ್ ಸಾರಕೂಟೇಲು, ದ.ಕ. ಗೌಡ ವಿದ್ಯಾಸಂಘದ ಅಧ್ಯಕ್ಷ ಧನಂಜಯ ಅಡ್ಪಂಗಾಯ, ಬೆಳ್ಳಾರೆ ಜ್ಞಾನಗಂಗಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಎಂ.ಪಿ.ಉಮೇಶ್, ಚಂದ್ರಕೋಲ್ಚಾರ್, ಸೇರಿದಂತೆ ಪ್ರಮುಖರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆ, ವಿದ್ಯಾಸಂಸ್ಥೆಯವರು, ವಿದ್ಯಾರ್ಥಿಗಳು, ಸಾರ್ವಜನಿಕ ನಾಗರಿಕರು ಭಾಗವಹಿಸಿದ್ದರು. ಸುಳ್ಯ ವೃತ್ತ ನಿರೀಕ್ಷಕ ನವೀನ್ಚಂದ್ರ ಜೋಗಿ, ಎಸೈ ದಿಲೀಪ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.