ಮಂಗಳೂರು, ಆ 29 (DaijiworldNews/HR): ಭ್ರಾಮರೀ ಯಕ್ಷಮಿತ್ರರು ಮಂಗಳೂರು ಇದರ ಐದನೇ ವರ್ಷದ 'ಭ್ರಾಮರೀ ಯಕ್ಷವೈಭವ-2022' ಕಾರ್ಯಕ್ರಮ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಯಕ್ಷಗಾನದ ಹಿರಿಯ ಹಾಸ್ಯಕಲಾವಿದ ಪೆರುವಡಿ ನಾರಾಯಣ ಭಟ್ಟರಿಗೆ 'ಭ್ರಾಮರೀ ಯಕ್ಷಮಣಿ ಪ್ರಶಸ್ತಿ', ನೇಪಥ್ಯ ಕಲಾವಿದರಾದ ಗೋಪಾಲ ಪೂಜಾರಿ ಹಾಗೂ ಬೊಕ್ಕಸ ಜಗನ್ನಾಥ ರಾವ್ ಅವರಿಗೆ ಭ್ರಾಮರೀ ಯಕ್ಷಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಅವರು ಮಾತನಾಡಿ, ಯಕ್ಷಗಾನ ಅಭಿರುಚಿಯ ವಾಟ್ಸಾಫ್ ಬಳಗ ಮಳೆಗಾಲದ ಸಮಯದಲ್ಲಿ ಯಕ್ಷಗಾನ ಹಾಗೂ ಆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು, ನೇಪಥ್ಯ ಕಲಾವಿದರನ್ನು ಗೌರವಿಸುವ ಮಹಾನ್ ಕಾರ್ಯಕ್ರಮವನ್ನು ಪ್ರತೀ ವರ್ಷ ರೂಪಿಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಯಕ್ಷಗಾನ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಮಂಗಳೂರು ಗಣೇಶೋತ್ಸವದ ಅಧ್ಯಕ್ಷ ಶಶಿಕಾಂತ್ ನಾಗ್ವೇಕರ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಅವರು ಕಾರ್ಯಕ್ರಮವನ್ನು ಶ್ಲಾಘಿಸಿದರು.
ಇತ್ತೀಚೆಗೆ ನಿಧನ ಹೊಂದಿದ ಬಲಿಪ ಪ್ರಸಾದ್ ಭಟ್ ಅವರ ಮನೆಯವರಿಗೆ ಭ್ರಾಮರೀ ಬಳಗದ ವತಿಯಿಂದ 20 ಸಾವಿರ ರೂ. ಹಸ್ತಾಂತರಿಸಲಾಯಿತು. ಬಳಗದ ಅಧ್ಯಕ್ಷ ವಿನಯಕೃಷ್ಣ ಕುರ್ನಾಡ್ ಸ್ವಾಗತಿಸಿದರು. ಗುರುರಾಜ ಹೊಳ್ಳ ಬಾಯಾರು ಅವರು ಪ್ರಸಾದ ಭಟ್ ಸಂಸ್ಮರಣೆ ಹಾಗೂ ನಿರೂಪಿಸಿದರು. ಶೈಲೇಶ್ ಪಚ್ಚನಾಡಿ ಸಮ್ಮಾನ ಪತ್ರ ವಾಚಿಸಿದರು.
ಬಳಿಕ ಯಕ್ಷಗಾನ ಪೂರ್ವರಂಗ, ಚೆಂಡೆ ಜುಗಲ್ ಬಂದಿ ಹಾಗೂ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ದಮಯಂತಿ ಪುನಃ ಸ್ವಯಂವರ, ಮಾಯಾ ತಿಲೋತ್ತಮೆ, ವೀರವರ್ಮ ಕಾಳಗ ಯಕ್ಷಗಾನ ಪ್ರದರ್ಶನ ಜರಗಿತು.