ಮಂಗಳೂರು, ಫೆ 4(MSP): ಬೆಂಗಳೂರು ಮೂಲದ ರ್ಯಾಪಿಡೊ ಬೈಕ್ ಮಂಗಳೂರಿನಲ್ಲಿ ಅಧಿಕೃತವಾಗಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಕಂಪನಿಯು ಹಲವು ವರ್ಷಗಳ ಹಳೆಯದಾದ ನಾಲ್ಕು ಚಕ್ರದ ಟ್ಯಾಕ್ಸಿ ಪದ್ಧತಿಗೆ ತಿಲಾಂಜಲಿ ಹಾಕಿ ಅದನ್ನು ದ್ವಿಚಕ್ರಗಳಿಗೆ ಬದಲಾಯಿಸಿದೆ. ಮಂಗಳೂರಿನಲ್ಲಿ ಈ ರ್ಯಾಪಿಡೋ ಬೈಕ್ ಸೇವೆಯನ್ನು 100 ಉಚಿತ ಹೆಲ್ಮೆಟ್ಗಳನ್ನು ನೀಡುವ ಮೂಲಕ ಆರಂಭಿಸಿತು.
ಹಣಕಾಸು ಉಳಿತಾಯ, ಸಮರ್ಪಕ ವೆಚ್ಚ ನಿರ್ವಹಣೆ, ಇಂಧನ ಕ್ಷಮತೆ ಮತ್ತು ಸಮಯ ಉಳಿತಾಯದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದು ರ್ಯಾಪಿಡೋದ ಮೂಲ ಉದ್ದೇಶವಾಗಿದೆ. ಪ್ರಯಾಣಿಕರು ಸಂಚಾರ ದಟ್ಟಣೆ ಅಥವಾ ಕಚೇರಿ ತೆರಳುವ ಸಂದರ್ಭ ಎದುರಿಸುವ ಸಂಚಾರ ದಟ್ಟಣೆಯಂತಹ ಸಮಸ್ಯೆಗಳಿಂದ ಹೊರಬರಲು ಸೇವೆಯನ್ನು ನೀಡುತ್ತಿದೆ. ಕಾರು ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಬದಲಿ ವ್ಯವಸ್ಥೆಯನ್ನು ನೀಡುತ್ತಿರುವ ರ್ಯಾಪಿಡೋ ಟ್ರಾಫಿಕ್ ಸಮಸ್ಯೆಯನ್ನು ತಪ್ಪಿಸಿ, ಗ್ರಾಹಕರು ಸೂಕ್ತ ಸಮಯದಲ್ಲಿ ತಮ್ಮ ಸ್ಥಳವನ್ನು ತಲುಪುವಂತೆ ಮಾಡುತ್ತದೆ.
ಈ ಸೇವೆಯನ್ನು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೆಲ್ಮೆಟ್ ಬಳಕೆಯ ಅರಿವು ಮೂಡಿಸಿದರು.
ರ್ಯಾಪಿಡೋ ವಿಶೇಷತೆ:
ಸೇವೆಯನ್ನು ಪಡೆಯಬೇಕೆಂದರೆ ಗ್ರಾಹಕರು ಮೊಬೈಲ್ನಲ್ಲಿ ರ್ಯಾಪಿಡೋ ಮೊಬೈಲ್ ಆಪ್ ಅನ್ನು ಡೌನ್ಲೋಡ್ ಮಾಡಿ ಮತ್ತು ರೈಡ್ ಅನ್ನು ಬುಕ್ ಮಾಡಬೇಕಾಗುತ್ತದೆ. ಬುಕ್ ಮಾಡಿದ ಕೆಲವೇ ಕ್ಷಣದಲ್ಲಿ ಗ್ರಾಹಕರ ಬಳಿಗೆ ಬೈಕ್ ಬಂದು ನಿಲ್ಲುತ್ತದೆ. ಬೈಕ್ ಓಡಿಸುವವರನ್ನು ರ್ಯಾಪಿಡೋ ಕ್ಯಾಪ್ಟನ್ ಎಂದು ಗುರುತಿಸಲಾಗುತ್ತದೆ. ಗ್ರಾಹಕರ ಬಳಿಗೆ ಬರುವ ಕ್ಯಾಪ್ಟನ್ ಬೈಕ್ನಲ್ಲಿ ಕೂರಿಸಿಕೊಂಡು ಗ್ರಾಹಕರು ಹೋಗಬೇಕಾದ ಸ್ಥಳವನ್ನು ತಲುಪಿಸುತ್ತಾರೆ.
ಈ ಸೇವೆಗೆ ಬೇಸ್ ದರ ಅಂದರೆ ಕನಿಷ್ಟ ದರ 15 ರೂಪಾಯಿಗಳು ಮತ್ತು ಪ್ರತಿ ಕಿಲೋಮೀಟರ್ಗೆ 3 ರೂಪಾಯಿಗಳಿರುತ್ತದೆ, ರ್ಯಾಪಿಡೋದ ಎಲ್ಲಾ ಕ್ಯಾಪ್ಟನ್ಗಳು ನಿಖರವಾದ ಬೈಕ್ ಮಾಲೀಕರಾಗಿರುತ್ತಾರೆ ಮತ್ತು ಅವರ ಬಳಿ ಚಾಲನಾ ಪರವಾನಗಿ ಇರುತ್ತದೆ. ಕಂಪನಿಯು ಕ್ಯಾಪ್ಟನ್ಗಳಿಗೆ ಶವರ್ ಕ್ಯಾಪ್ ಹೆಲ್ಮೆಟ್ಗಳನ್ನು ನೀಡುತ್ತದೆ. ಅದೇ ರೀತಿ ಎಲ್ಲಾ ಕ್ಯಾಪ್ಟನ್ಗಳಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಮತ್ತು ಕಾನೂನುಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿರುತ್ತದೆ.
ರ್ಯಾಪಿಡೋದ ಕಾರ್ಯಾಚರಣೆ ಮುಖ್ಯಸ್ಥ ಭರತ್ ಅವರು ಮಾತನಾಡಿ, “ಪ್ರಯಾಣಿಕರಿಗೆ ಆರ್ಥಿಕವಾಗಿ, ಅನುಕೂಲಕರವಾಗಿ ಮತ್ತು ಅತ್ಯುತ್ತಮ ಗುಣಮಟ್ಟದ ಸಾರಿಗೆ ಸೌಲಭ್ಯವನ್ನು ಕಲ್ಪಿಸುವುದು ರ್ಯಾಪಿಡೋದ ಪರಿಕಲ್ಪನೆಯಾಗಿದೆ. ವಿಶೇಷವಾಗಿ ದೂರದ ಸ್ಥಳಗಳಿಗೆ ಬೇಗನೇ ತಲುಪುವ ತರಾತುರಿಯಲ್ಲಿರುವ ಪ್ರಯಾಣಿಕರಿಗೆ ಈ ಸೇವೆ ಅತ್ಯುತ್ತಮವಾಗಿದೆ. ಬಹುತೇಕ ಪ್ರಕರಣಗಳಲ್ಲಿ ಬಸ್ ಮತ್ತು ಕಾರಿಗಿಂತ ಬೈಕ್ ವೇಗವಾಗಿ ಹೋಗುತ್ತದೆ. ಆದರೆ ಪ್ರತಿಯೊಬ್ಬರೂ ಬೈಕ್ ಮಾಲೀಕರಾಗಿರುವುದಿಲ್ಲ ಅಥವಾ ಬೈಕ್ ರೈಡ್ ಮಾಡಲು ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ತಟ್ಟನೆ ರ್ಯಾಪಿಡೋ ನೆನಪಾಗುತ್ತದೆ. ಅಹ್ಮದಾಬಾದ್, ಭುವನೇಶ್ವರ, ಗುವಾಹತಿ, ಭೋಪಾಲ್, ಚೆನ್ನೈ, ಕೊಲ್ಕತ್ತಾ, ಹೈದ್ರಾಬಾದ್, ಮೈಸೂರು, ಗುರುಗಾಂವ್ ಸೇರಿದಂತೆ ದೇಶದ ಇತರೆ ೨೫ ನಗರಗಳಲ್ಲಿ ನಮ್ಮ ರ್ಯಾಪಿಡೋ ಸೇವೆ ಲಭ್ಯವಿದೆ” ಎಂದು ಮಾಹಿತಿ ನೀಡಿದರು.
ರ್ಯಾಪಿಡೊದಲ್ಲಿ ಉದ್ಯೋಗವಕಾಶ:
ಈ ಸೇವೆ ಮೂಲಕ ಉದ್ಯೋಗವಕಾಶಗಳೂ ಆರಂಭವಾಗಿದ್ದು, ಸಾರ್ವಜನಿಕರು ಕ್ಯಾಪ್ಟನ್ ಆಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ಭಾರತದಲ್ಲಿ ಕ್ಯಾಪ್ಟನ್ಗಳು ಪ್ರತಿ ತಿಂಗಳು 20 ಸಾವಿರ ರೂಪಾಯಿವರೆಗೆ ಆದಾಯ ಗಳಿಸುತ್ತಿದ್ದಾರೆ. ಮಂಗಳೂರಿನಲ್ಲಿ ಆರಂಭಿಸಿರುವ ಈ ಸೇವೆಯಡಿ ಆರಂಭಿಕ ದರ 3 ಕಿಲೋಮೀಟರ್ಗೆ ಕೇವಲ 15 ರೂಪಾಯಿಗಳಾಗಿದೆ.