ಮಂಗಳೂರು, ಫೆ 4(MSP): ಗಾಂಧಿ ಹತ್ಯೆ ದಿನದ ಘಟನೆಯನ್ನು ಮರು ಸೃಷ್ಟಿಸಿ ಹಿಂದು ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಲಕ್ನೋದಲ್ಲಿ ಮಹಾತ್ಮಾ ಗಾಂಧಿಯವರ ಪ್ರತಿಕೃತಿಗೆ ಗುಂಡೇಟು ನೀಡಿದ ಘಟನೆಗೆ ಜಿಲ್ಲಾ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಘಟನೆಯನ್ನು ಖಂಡಿಸಿ ಫೆ.4 ರ ಸೋಮವಾರ ಕಾಂಗ್ರೆಸ್ ಪಕ್ಷವು ಮಲ್ಲಿಕಟ್ಟೆಯಲ್ಲಿರುವ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಈ ಸಂದರ್ಭ ಮಾತನಾಡಿದ, ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಬಿ.ರಮಾನಾಥ ರೈ, ಗಾಂಧಿ ಹತ್ಯೆ ಘಟನೆಯ ಮರುಸೃಷ್ಟಿ, ಸಂಘ ಪರಿವಾರ ಕ್ರೂರ ಮನಃಸ್ಥಿತಿಯನ್ನು ಬಯಲು ಮಾಡಿದೆ. ಸಂಘ ಪರಿವಾರವೂ ದೇಶವನ್ನು ಅರಾಜಕತೆಯತ್ತ ಕೊಂಡೆಯ್ಯುತ್ತಿದ್ದು, ದೇಶದ ಯುವ ಜನರ ಮನಸ್ಸಿನಲ್ಲಿ ಹಿಂಸೆಯ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಇದಕ್ಕೆ ಗಾಂಧಿ ಹತ್ಯೆಯ ಮರುಸೃಷ್ಟಿಗಿಂತ ಉತ್ತಮ ಉದಾಹರಣೆ ಸಿಗಲಾರದು. ಬ್ರಿಟೀಷರನ್ನು ದೇಶದಿಂದ ತೊಲಗಿಸಿ, ಭಾರತ ಪಡೆದುಕೊಂಡ ಸ್ವಾತಂತ್ರವನ್ನು ಸಂಘ ಪರಿವಾರ ಒಪ್ಪಿಕೊಂಡಂತೆ ಕಾಣಿಸುತ್ತಿಲ್ಲ ಎಂದು ತಿಳಿದರು.
ಗಾಂಧಿಯವರ ಪ್ರತಿಕೃತಿಗೆ ಗುಂಡೇಟು ನೀಡಿದ ಘಟನೆಯೂ, ಸಂಘ ಪರಿವಾರದ ಕ್ರೂರ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ಈ ಘಟನೆಯೂ ದೇಶದ ೧೩೦ ಕೋಟಿ ಜನರಿಗೆ ಮಾಡಿದ ಅವಮಾನ. ಯಾಕೆಂದರೆ ದೇಶದ ಬಗ್ಗೆ ಗೌರವವಿರುವ ೧೩೦ ಕೋಟಿ ಜನರೂ ಕೂಡಾ ಗಾಂಧಿಯನ್ನು ಗೌರವಿಸುತ್ತಾರೆ. ಸಂವಿಧಾನವನ್ನು ಅವಮಾನ ಮಾಡಿದ ಈ ಘಟನೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಇದೊಂದು ಹೀನ ಕೃತ್ಯವಾಗಿದ್ದು, ಮಹಾತ್ಮ ಗಾಂಧಿಯನ್ನು ಗೌರವಿಸುವ, ’ಅಸಂಖ್ಯಾತ ಜನರನ್ನು ’ ಈ ಮೂಲಕ ಹತ್ಯೆ ಮಾಡಿದ್ದಾರೆ. ಇದು ಬಿಜೆಪಿಯ ರಾಜಕೀಯ ಅಜಂಡಾವಾಗಿದ್ದು, ಇದಕ್ಕೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿಭಟನೆ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಮುಖಂಡ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಕವಿತಾ ಸನಿಲ್, ನಗರ ಪಾಲಿಕೆ ಸದಸ್ಯ ಶಲೆಟ್ ಪಿಂಟೋ, ಆಶಾ ಡಿ’ಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು.