ಮಂಗಳೂರು, ಆ 29 (DaijiworldNews/HR): ಪ್ರಧಾನಿ ಮೋದಿ ಅವರ ಭದ್ರತೆ ದೃಷ್ಠಿಯಿಂದ ಕೂಳೂರಿನಲ್ಲಿ ವಾಸವಿದ್ದ ಕುಟುಂಬಕ್ಕೆ ತಾತ್ಕಾಲಿಕ ವ್ಯವಸ್ಥೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಸಪ್ಟಂಬರ್ 2ಕ್ಕೆ ಪ್ರಧಾನಿ ಮೋದಿ ಮಂಗಳೂರಿಗೆ ಬರುತ್ತಿರುವುದರಿಂದ ಕೂಳೂರಿನಲ್ಲಿ ಬಸವನ ಮೇಯಿಸಿ ಟೆಂಟ್ ಕಟ್ಟಿಕೊಂಡಿದ್ದ ಒಂಭತ್ತು ಕುಟುಂಬಗಳನ್ನು ಬೀದಿಪಾಲು ಮಾಡಲಾಗಿದೆ ಎಂದು ವರದಿಯಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಭದ್ರತಾ ಕಾರಣಗಳಿಗಾಗಿ ಮತ್ತು ಪಾರ್ಕಿಂಗ್ ಮತ್ತು ಇತರ ಕಾರ್ಯಕ್ರಮ ಸಂಬಂಧಿತ ಅವಶ್ಯಕತೆಗಳಿಗಾಗಿ ಲಭ್ಯವಿರುವ ಪ್ರತಿಯೊಂದು ಸ್ಥಳವನ್ನು ಬಳಸಿಕೊಳ್ಳಲು ಪೊಲೀಸರು ಅವರನ್ನು ಸ್ಥಳಾಂತರಿಸಲು ಕೇಳಿಕೊಂಡಿದ್ದಾರೆ. ತಾತ್ಕಾಲಿಕ ವಸತಿಗಾಗಿ ಅವರಿಗೆ ಹತ್ತಿರದ ಸ್ಥಳಗಳನ್ನು ಒದಗಿಸಲಾಗುವುದು ಎಂದಿದ್ದಾರೆ.
ಇನ್ನು ತಹಶೀಲ್ದಾರ್ ಮತ್ತು ಇತರ ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಊಟ ಸೇರಿದಂತೆ ಪರ್ಯಾಯ ವ್ಯವಸ್ಥೆ ಮಾಡಲು ಆ ಕುಟುಂಬಗಳನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿದ ನಂತರ ಇಲ್ಲಿ ನೆಲೆಸಲು ಆಸಕ್ತಿ ತೋರಿದರೆ ಶಾಶ್ವತ ಪುನರ್ವಸತಿ ಯೋಜನೆ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ.