ಕುಂದಾಪುರ, ಆ 29 (DaijiworldNews/MS): ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ಕೆನರಾ ಬ್ಯಾಂಕ್ ಸಮೀಪ ಆಗಸ್ಟ್ 28 ರ ಭಾನುವಾರ ಸಂಜೆ ಚಲಿಸುತ್ತಿದ್ದ ಖಾಸಗಿ ಬಸ್ಸಿನ ಮುಂಭಾಗದ ಟೈರ್ ಏಕಾಏಕಿ ಸಿಡಿದಿದ್ದು , ಚಾಲಕನ ಸಮಯ ಪ್ರಜ್ಞೆದಿಂದ ಆಗಬಹುದಾದ ದೊಡ್ಡ ದುರಂತ ತಪ್ಪಿದೆ.
ಖಾಸಗಿ ಬಸ್ ಕಾರ್ಕಳದಿಂದ ಕುಂದಾಪುರಕ್ಕೆ ಸಂಚರಿಸುತ್ತಿದ್ದು ತೆಕ್ಕಟ್ಟೆ ಬಳಿ ಏಕಾಏಕಿ ಮುಂಭಾಗದ ಟೈರ್ ಒಡೆದಿದ್ದರಿಂದ ಬಸ್ ರಸ್ತೆ ವಿಭಜಕದ ಏರುವ ಸಾಧ್ಯತೆ ಇತ್ತು. ಆದರೆ ಈ ಸಂದರ್ಭ ಚಾಲಕನ ಸಮಯ ಪ್ರಜ್ಞೆಯಿಂದ ತಕ್ಷಣ ಬಸ್ಸನ್ನು ತಿರುಗಿಸಿ ರಸ್ತೆಯ ಇನ್ನೊಂದು ಬದಿಗೆ ಹೋಗದಂತೆ ತಡೆದಿದ್ದು ಇದರಿಂದ ಭಾರೀ ಅವಘಡವೊಂದು ತಪ್ಪಿದೆ.
.ಬಸ್ಸಿನಲ್ಲಿ ಸುಮಾರು 15 ಮಂದಿ ಪ್ರಯಾಣಿಕರಿದ್ದು, ಯಾರಿಗೂ ಗಾಯಗಳಾಗಿಲ್ಲ. ತಕ್ಷಣವೇ ಅವರಿಗೆ ಪರ್ಯಾಯ ಬಸ್ ಒದಗಿಸಲಾಯಿತು. ಬಸ್ ರಸ್ತೆ ಮಧ್ಯೆಯೇ ಕೆಲಕಾಲ ನಿಂತಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು. ಬಳಿಕ ಸ್ಥಳೀಯರ ನೆರವಿನಿಂದ ಬಸ್ಸನ್ನು ರಸ್ತೆ ಬದಿಗೆ ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು.