ಉಡುಪಿ, ಆ 28 (DaijiworldNews/DB): ಬಡ ಮಕ್ಕಳ ಚಿಕಿತ್ಸೆಗಾಗಿ ಪ್ರತಿವರ್ಷ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ವಿಶಿಷ್ಟ ವೇಷಧಾರಣೆ ಮಾಡಿಕೊಂಡು ಹಣ ಸಂಗ್ರಹ ಮಾಡಿ ಸಾರ್ಥಕ ಸಮಾಜ ಸೇವೆ ಮಾಡಿದ್ದ ರವಿ ಕಟಪಾಡಿ ಅವರು ತಮ್ಮ ವೇಷಧಾರಣೆಗೆ ವಿದಾಯ ಹೇಳಲಿದ್ದಾರೆಂಬ ಸುದ್ದಿಗಳು ಸದ್ಯ ವೈರಲ್ ಆಗುತ್ತಿವೆ. ಆದರೆ ಇದನ್ನು ರವಿ ಕಟಪಾಡಿ ಅವರು ಅಧಿಕೃತಗೊಳಿಸಿಲ್ಲ.
ರವಿ ಅವರು ಕಳೆದ ಏಳು ವರ್ಷಗಳಿಂದ ಸಂಗ್ರಹಿಸಿದ ಮೊತ್ತ ಈ ಅಷ್ಟಮಿಗೆ ಒಂದು ಕೋಟಿ ರೂ.ಗಳಾಗಿದ್ದು, ಮುಂದಿನ ಮಂಗಳವಾರ ಇದರ ವಿತರಣೆಗಾಗಿ ಸಮಾರಂಭವೊಂದನ್ನು ಆಯೋಜಿಸಲಾಗಿದೆ. ತಮ್ಮ ಸಮಾಜ ಸೇವೆಯ ಮುಂದುವರಿಕೆ ಅಥವಾ ನಿಲ್ಲಿಸುವ ಬಗ್ಗೆ ಈ ಸಮಾರಂಭದಲ್ಲೇ ಅವರು ಮಾಹಿತಿ ನೀಡಲಿದ್ದಾರೆ. ಈ ಕುರಿತು ರವಿ ಕಟಪಾಡಿಯವರೇ ಮಾಹಿತಿ ನೀಡಿದ್ದು, ಸದ್ಯ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ನಾನು ವೇಷಧಾರಣೆ ನಿಲ್ಲಿಸುವ ಬಗ್ಗೆ ಈವರೆಗೆ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶಿಷ್ಟ ವೇಷಧಾರಣೆ ಮಾಡಿಕೊಂಡು ಬಡ ಮಕ್ಕಳ ಚಿಕಿತ್ಸೆಗಾಗಿ 90 ಲಕ್ಷ ರೂ.ಗಳನ್ನು ರವಿ ಅವರು ಸಂಗ್ರಹಿಸಿದ್ದರು. ಈ ಬಾರಿ ಡೆಮೋನ್ ಮೂಲಕ ಹತ್ತು ಲಕ್ಷ ರೂ. ಸಂಗ್ರಹಿಸಿದ್ದು, ಒಟ್ಟು ಮೊತ್ತ 1 ಕೋಟಿ ರೂ. ಆಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳ 66 ಮಂದಿ ಮಕ್ಕಳಿಗೆ ಈವರೆಗೆ ಅವರು ನೆರವಾಗಿದ್ದಾರೆ.