ಕಾರ್ಕಳ, ಆ 28 (DaijiworldNews/HR): ಹಿಟಾಚಿ ಬಾಡಿಗೆ ದರ ಏರಿಕೆಯ ಕುರಿತು ಹಿಟಾಚಿ ಮಾಲಕರ ಸಂಘದ ನಿರ್ಧಾರಕ್ಕೆ ರೈತರು ಹಾಗೂ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಕಳೆದ 6 ತಿಂಗಳ ಹಿಂದಷ್ಟೇ ಡೀಸೆಲ್ ಹಾಗೂ ನಿರ್ವಹಣೆಯ ಕಾರಣನೀಡಿ ಬಾಡಿಗೆ ದರ ಏರಿಸಿದ್ದು, ಇದೀಗ ಮತ್ತೆ ಯಾವ ಕಾರಣದಿಂದ ಬಾಡಿಗೆ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಹಿಟಾಚಿ ಗಂಟೆಗೆ 1300 ರೂ ಬಾಡಿಗೆ ದರ ನಿಗದಪಡಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿದ್ದು,ಯಾವುದೇ ಕಾರಣಕ್ಕೂ ಹೆಚ್ಚುವರಿ ಬಾಡಿಗೆ ನೀಡಲು ಸಾಧ್ಯವಿಲ್ಲವೆಂದು ಮಿಯ್ಯಾರು ಪ್ರಗತಿಪರ ಕೃಷಿಕರಾದ ಜೆರಾಲ್ಡ್ ಡಿಸಿಲ್ವ ಸ್ಪಷ್ಟಪಡಿಸಿದ್ದಾರೆ.
ಕೃಷಿ ಚಟುವಟಿಕೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಏಕಾಎಕಿ 300 ರೂ ದರ ಹೆಚ್ಚಳದಿಂದ ಬಡರೈತರ ಮೇಲೆ ಭಾರೀ ಹೊರೆಬೀಳಲಿದೆ, ಸಾಲ ಮಾಡಿ ಕೃಷಿ ಜಮೀನು ಸಮತಟ್ಟು, ತೋಟ ರಚನೆ ಮುಂತಾದ ಕೆಲಸಗಳಿಗೆ ಹೆಚ್ಚಾಗಿ ಜೆಸಿಬಿ ಹಿಟಾಚಿಗಳನ್ನೇ ಬಳಸಲಾಗುತ್ತದೆ ಆದ್ದರಿಂದ ಈ ಹಿಂದೆ ಪರಿಷ್ಕರಿಸಿದ ಹಳೆಯ ಬಾಡಿಗೆ ದರವನ್ನೇ ನಿಗದಿಪಡಿಸುವಂತೆ ಜೆರಾಲ್ಡ್ ಡಿಸಿಲ್ವ ಆಗ್ರಹಿಸಿದ್ದಾರೆ. ಅಲ್ಲದೇ ಯಾರೂ ಕೂಡ ಹೆಚ್ಚುವರಿ ಬಾಡಿಗೆ ದರ ಪಾವತಿಸದಂತೆ ಮನವಿ ಮಾಡಿದ್ದಾರೆ.
ಬಾಡಿಗೆ ದರ ಪರಿಷ್ಕರಣೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಧಿಕಾರಿಗಳ ಜತೆ ಸಭೆ ನಡೆಸಿ ಬಾಡಿಗೆ ದರ ಏರಿಸುವ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು, ಡೀಸೆಲ್ ದರ ಇಳಿಕೆಯಾದರೂ ಮತ್ತೆ ದರ ಪರಿಷ್ಕರಣೆ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.