ವಿಶೇಷ ವರದಿ: ಆರ್.ಬಿ.ಜಗದೀಶ್
ಕಾರ್ಕಳ, ಆ 28 (DaijiworldNews/HR): ಸುಂದರ ಕಾರ್ಕಳ ಸ್ವಚ್ಚ ಕಾರ್ಕಳ ಎಂಬ ಧ್ಯೇಯವಾಕ್ಯವನ್ನು ಮುಂದಿಟ್ಟು ತ್ಯಾಜ್ಯ ನಿರ್ವಹಣೆಗೆಂದು ಕಾರ್ಕಳ ಪುರಸಭೆಯು ಬಂಗ್ಲೆಗುಡ್ಡೆಯ ಪರನೀರು ವಸತಿ ಪ್ರದೇಶದಲ್ಲಿ ಒಣ ಕಸ ಸಂಗ್ರಹಕ್ಕೆಂದು ನಿರ್ಮಿಸಿದ ಕಟ್ಟಡವೊಂದು ಪ್ರಸ್ತುತ ಅನಾಥ ಸ್ಥಿತಿಯಲ್ಲಿ ಇದೆ.
ಕಳೆದ ಎಂಟು ವರ್ಷಗಳ ಹಿಂದೆ ರಾಷ್ಟ್ರದ ಪ್ರಶಸ್ತಿಗೆ ಭಾಜನವಾದ ಕಾರ್ಕಳ ಪುರಸಭೆಯ ಕಾರ್ಯದಕ್ಷತೆ ಭಾಗವಾಗಿ ಬಂಗ್ಲೆಗುಡ್ಡೆ ಪರನೀರು ಎಂಬಲ್ಲಿ ಒಣತ್ಯಾಜ್ಯ ನಿರ್ವಹಣೆಗೆಂದೇ ಸುಮಾರು 7 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಅದರ ಅದರ ಮೇಲ್ಚಾವಣೆಗೆ ಸಿಮೆಂಟ್ ಶೀಟ್ನ್ನು ಅವಳವಡಿಸಲಾಗಿದೆ.
ದುಂದು ವೆಚ್ಚ:
ಪುರಸಭೆಯ ಎರಡನೇ ವಾರ್ಡ್ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಮನೆಗಳ ಜಾಗವು ಸರಕಾರದಿಂದಲೇ ಮಂಜೂರು ಆಗಿದೆ. ಆದೇ ಕಾರಣದಿಂದ ಆ ಪ್ರದೇಶದಲ್ಲಿ ವಾಸವಾಗಿರುವವರು ಬಡ ಹಾಗೂ ಮಧ್ಯಮ ಕುಟುಂಬಕ್ಕೆ ಒಳಪಟ್ಟವರಾಗಿದ್ದಾರೆ. ಜನವಸತಿ ಅಧಿಕ ಸಂಖ್ಯೆಯಲ್ಲಿ ಇರುವ ಈ ಪ್ರದೇಶದಿಂದ ಉತ್ಪತ್ತಿಯಾಗುವ ಒಣ ತ್ಯಾಜ್ಯ ಸಂಗ್ರಹಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಒಣಕಸ ಸಂಗ್ರಹ ಕೇಂದ್ರವನ್ನು ವಸತಿ ಪ್ರದೇಶದ ಮಧ್ಯಭಾಗದಲ್ಲಿ ಸ್ಥಾಪಿಸಲಾಗಿದೆ.
ಸ್ಥಳೀಯರಿಗೆ ಇದರ ಕುರಿತು ಯಾವುದೇ ಮಾಹಿತಿಯನ್ನು ನೀಡದೇ ಹಾಗೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಒಣಹಸ ಸಂಗ್ರಹದ ಕೇಂದ್ರವನ್ನು ಪುರಸಭೆ ಸ್ಥಾಪಿಸಿರುವುದರಿಂದ ಸ್ಥಳೀಯರು ಆರಂಭದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಿದರು. ಪರಿಣಾಮವಾಗಿ ತ್ಯಾಜ್ಯ ವಿಂಗಡಣೆ ಕಾರ್ಯ ನಡೆಯದೇ ಕಟ್ಟಡ ನೆನೆಗುದ್ದಿಗೆ ಬಿದ್ದಿದೆ.
ಪುರಸಭೆಯಿಂದ ಕೈ ಜಾರಿತ್ತೇ?
ನಿರ್ಮಾಣಗೊಂಡ ಒಣಕಸ ಸಂಗ್ರಹ ಕೇಂದ್ರವು ಕಾರ್ಕಳ ಪುರಸಭೆಯ ಹಿಡಿತದಿಂದ ಕೈಜಾರಿದಂತಿದೆ. ಒಣಕಸ ಸಂಗ್ರಹ ಕೇಂದ್ರಕ್ಕೆ ಪುರಸಭೆ ಹಾಕಲಾಗಿದ್ದ ಬೀಗ ಮುರಿದು ಹಾಕಲಾಗಿದೆ. ಅದರೊಳಗೆ ಕೆಲವರು ತಮ್ಮ ಮನೆಯ ಸಾಮಾಗ್ರಿಗಳನ್ನು ಸುರಕ್ಷಿತವಾಗಿ ಇಟ್ಟಿರುವುದು ಕಂಡುಬಂದಿದೆ. ಒಣಕಸ ಸಂಗ್ರಹ ಕೇಂದ್ರವು ಅಕ್ರಮ ಕೇಂದ್ರವಾಗಿ ಮಾರ್ಪಡದಂತೆ ಮುನ್ನೆಚ್ಚರಿಕಾ ಕ್ರಮವನ್ನು ಪುರಸಭೆ ವಹಿಸಿಕೊಳ್ಳಬೇಕೆಂಬ ಒತ್ತಾಯ ವ್ಯಾಪಕವಾಗಿ ಕೇಳಿಬರುತ್ತಿದೆ.
ಒಣಕಸ ಸಂಗ್ರಹ ಕೇಂದ್ರದ ಕಾರ್ಯಚರಣೆ ಸ್ಥಳೀಯರಿಂದ ಅಡ್ಡಿಯಾಗಿದೆ. ಈ ಕುರಿತು ಮತ್ತೊಮ್ಮೆ ಸ್ಥಳೀಯರಲ್ಲಿ ಮನವರಿಕೆ ಮಾಡಿ ಅಗತ್ಯ ಮಾಹಿತಿ ನೀಡಿ ಅವರ ವಿಶ್ವಾಸದೊಂದಿಗೆ ಮತ್ತೇ ಒಣಕಸ ಸಂಗ್ರಹ ಕೇಂದ್ರವನ್ನು ಆರಂಭಿಸುವುದಕ್ಕೆ ಚಿಂತನೆ ನಡೆಸಲಾಗುವುದು. ಪುರಸಭೆಯ ಅಧಿಕಾರಿಯ ಅದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಕಳ ಪುರಸಭೆ ಆರೋಗ್ಯಧಿಕಾರಿ ಲೈಲಾ ಥೋಮಸ್ ಹೇಳಿದ್ದಾರೆ.