ಕಾರ್ಕಳ, ಆ 27 (DaijiworldNews/MS): ಖಾಸಗಿ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕುಮಾರಿ ಸುನಿತಾ ಎಂಬವರಿಗೆ ಅದೇ ಕಾಲೇಜಿನಲ್ಲಿ ಸೆಕ್ಯೂರಿಟಿ ಸೂಪರ್ವೈಸರ್ ಆಗಿದ್ದ ಹಿರಿಯಣ್ಣ ಎಂಬುವರು ಮಾನಸಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತು ಸುನಿತಾ ಕಾಲೇಜಿನ ವಿಶ್ರಾಂತಿ ಕೊಠಡಿಯಲ್ಲೇ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸಾಣೂರಿನ ನಿವಾಸಿಯಾಗಿರುವ ಕುಮಾರಿ ಸುನೀತಾ ಕಳೆದ ಕೆಲ ತಿಂಗಳ ಹಿಂದಷ್ಟೇ ಖಾಸಗಿ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡಾಗಿ ಕೆಲಸಕ್ಕೆ ಸೇರಿದ್ದರು. ಹಿರಿಯಣ್ಣ ಅವರು ಕಾಲೇಜಿನ ಸೆಕ್ಯೂರಿಟಿ ಸೂಪರ್ ಆಗಿ ಭದ್ರತೆ ಉಸ್ತುವಾರಿ ನೋಡಿಕೊಳ್ಳುವ ಜತೆಗೆ ಗಾರ್ಡ್ ಗಳ ಕೆಲಸದ ಮೇಲ್ವಿಚಾರಣೆ ಮಾಡುತ್ತಿದ್ದರು.
ಸುನಿತಾ ಅವರು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ನೀನು ಮೊಬೈಲ್ ನಲ್ಲಿ ಮಾತನಾಡುತ್ತಾ ಇರುತ್ತೀಯಾ, ಕೆಲಸದ ಮೇಲೆ ಗಮನ ಕೊಡು ಸರಿಯಾಗಿ ಕೆಲಸ ಮಾಡದಿದ್ದರೆ ನಿನ್ನನ್ನು ಮನೆಗೆ ಕಳಿಸುತ್ತೇನೆ ಎಂದೆಲ್ಲಾ ಕಿರುಕುಳ ನೀಡುತ್ತಿದ್ದರು, ತಾನು ದಲಿತ ಸಮುದಾಯಕ್ಕೆ ಸೇರಿದವಳು ಎಂದು ವಿನಾಕಾರಣ ಕಿರುಕುಳ ನೀಡಲಾಗಿದೆ ಎಂದು ಸುನೀತಾ ಆರೋಪಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮನನೊಂದು ತಾನು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಹಿರಿಯಣ್ಣ ವಿರುದ್ಧ ದೂರು ನೀಡಿದ್ದಾರೆ ಪೊಲೀಸರು ಈ ಕುರಿತು ದಲಿತ ದೌರ್ಜನ್ಯ ಕಾಯಿದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.