ಉಡುಪಿ, ಆ 27 (DaijiworldNews/DB): ಪೆರಂಪಳ್ಳಿ-ಮಣಿಪಾಲ ರಸ್ತೆ ಕಾಮಗಾರಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಟಿಡಿಆರ್ ಪ್ರಕ್ರಿಯೆಯಲ್ಲಿನ ಸಮಸ್ಯೆಯಿಂದಾಗಿ ಕಾಮಗಾರಿ ತಡವಾಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಪೆರಂಪಳ್ಳಿ-ಮಣಿಪಾಲ ರಸ್ತೆ ಕಾಮಗಾರಿಯ ಅವ್ಯವಸ್ಥೆ ಸಂಬಂಧಿಸಿ ಜವಾಬ್ದಾರಿಯುತ ಉತ್ತರ ನೀಡಬೇಕೆಂದು ಒತ್ತಾಯಿಸಿ ಉಡುಪಿ ನಿವಾಸಿ ಕೋಮಲ್ ಜೆನ್ನಿಫರ್ ಡಿಸೋಜಾ ಎಂಬುವವರು ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಅವರು, ಈ ರಸ್ತೆಯ ಪರಿಸ್ಥಿತಿ ಬಗ್ಗೆ ನನಗೆ ತಿಳಿದಿದೆ. ಕಾಮಗಾರಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ರಸ್ತೆಯಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಈಗಾಗಲೇ ಏಕಪದರ ಡಾಮರ್ ಅಳವಡಿಸಲಾಗಿದೆ. ಎರಡು ಪದರ ಡಾಮರ್ ಅಳವಡಿಸುವ ಪ್ರಕ್ರಿಯೆ ನಡೆಯಬೇಕಿದೆ ಎಂದಿದ್ದಾರೆ.
ಡಾಮರ್ ಹಾಕದೇ ಕೇವಲ ಜಲ್ಲಿಕಲ್ಲುಗಳನ್ನು ಮಾತ್ರ ಅಳವಡಿಸಿದರೆ ಜಲ್ಲಿಕಲ್ಲುಗಳು ಎದ್ದು ಹೋಗುವ ಸಂಭವ ಹೆಚ್ಚು. ಹೊಸ ರಸ್ತೆಯಾಗಿರುವುದರಿಂದ ಮಳೆಗೆ ಹಾಳಾಗುತ್ತದೆ. ಮೊದಲು ಈ ರಸ್ತೆ ಏಕರಸ್ತೆಯಾಗಿದ್ದು, ರಸ್ತೆ ಅಗಲೀಕರಣಕ್ಕಾಗಿ 26 ಕೋಟಿ ರೂ.ಗಳು ಮಂಜೂರಾಗಿ ಕಳೆದ ನವೆಂಬರ್ನಲ್ಲಿ ಅಗಲೀಕರಣ ಕಾಮಗಾರಿ ಪ್ರಾರಂಭವಾಗಿದೆ. ಈ ರಸ್ತೆಯ ಅಭಿವೃದ್ದಿಗಾಗಿ ಕನಿಷ್ಠ 100 ಸಭೆಗಳನ್ನು ಕರೆದಿದ್ದೇನೆ. ಈ ರಸ್ತೆಗೆ ಬೀದಿದೀಪ ಅಳವಡಿಕೆಗಾಗಿ ಟೆಂಡರ್ ಪ್ರಕ್ರಿಯೆ ಈಗಾಗಲೇ ನಡೆದಿದೆ. ಟಿಡಿಆರ್ ಪ್ರಕ್ರಿಯೆಯಲ್ಲಿನ ಸಮಸ್ಯೆಯಿಂದಾಗಿ ಕಾಮಗಾರಿ ತಡೆವಾಗಿದೆ. ಸಾರ್ವಜನಿಕರು ಇದನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಾರ್ವಜನಿಕ ಕಳಕಳಿಯಿಂದ ಕೋಮಲ್ ಅವರು ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಅದಕ್ಕೆ ನನ್ನಿಂದ ಯಾವುದೇ ವಿರೋಧವಿಲ್ಲ. ಆದರೆ ಸಾರ್ವಜನಿಕರಲ್ಲಿ ಯಾವುದೇ ತೊಂದರೆ ಇರಬಾರದೆಂಬ ಉದ್ದೇಶದಿಂದ ಸ್ಪಷ್ಟೀಕರಣ ನೀಡಿದ್ದೇನೆ ಎಂದವರು ತಿಳಿಸಿದರು.