ಮಂಗಳೂರು, ಆ 27 (DaijiworldNews/DB): ಮಂಗಳೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಎರಡು ಲಕ್ಷ ಮಂದಿ ಆಸೀನರಾಗಲು ಬೇಕಾಗುವ ಪೆಂಡಾಲ್ ನಿರ್ಮಾಣ ಕಾಮಗಾರಿ ಕೂಳೂರಿನ ಗೋಲ್ಡ್ಪಿಂಚ್ ಸಿಟಿಯಲ್ಲಿ ಭರದಿಂದ ಸಾಗುತ್ತಿದೆ.
ಈಗಾಗಲೇ ಪ್ರಧಾನಿ ಮೋದಿ ಕಾರ್ಯಕ್ರಮಕ್ಕಾಗಿ ವೇದಿಕೆಯನ್ನು ಸಿದ್ದಗೊಳಿಸಲಾಗಿದೆ. ವೇದಿಕೆಯು 80 ಅಡಿ ಅಗಲ, 60 ಅಡಿ ಉದ್ದ, 20 ಅಡಿ ಎತ್ತರವನ್ನು ಹೊಂದಿದೆ. ಕಾರ್ಯಕ್ರಮ ನಡೆಯುವ ಸಂದರ್ಭ ಮಳೆ ಬಂದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅನುವಾಗುವಂತೆ ತಾತ್ಕಾಲಿಕ ಒಳಚರಂಡಿ ವ್ಯವಸ್ಥೆಯನ್ನು ಈಗಾಗಲೇ ಮಾಡಲಾಗಿದೆ. ಅಲ್ಲದೆ ತಾತ್ಕಾಲಿಕ ಹೆಲಿಪ್ಯಾಡ್ನ್ನೂ ನಿರ್ಮಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನ ನಿಲುಗಡೆಗಾಗಿ ಪಾರ್ಕಿಂಗ್ ಸ್ಥಳವನ್ನು ಗೊತ್ತುಪಡಿಸಲಾಗಿದೆ.
ಎನ್ಎಂಪಿಟಿಯಲ್ಲಿ ಲೋಕಾರ್ಪಣೆಗೊಳ್ಳಲಿರುವ ವಿವಿಧ ಯೋಜನೆಗಳ ಪಟ್ಟಿಯನ್ನು ಈಗಾಗಲೇ ಸಿದ್ದಗೊಳಿಸಲಾಗಿದೆ. ಮೂಲವೊಂದರ ಪ್ರಕಾರ ಎನ್ಎಂಪಿಟಿಯಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸಭಾ ಕಾರ್ಯಕ್ರಮಕ್ಕಾಗಿ ಗೋಲ್ಡ್ ಫಿಂಚ್ ಸಿಟಿ ಮೈದಾನಕ್ಕೆ ಆಗಮಿಸಲಿದ್ದಾರೆ. ಆದರೆ ಇನ್ನೊಂದು ಮೂಲದ ಮಾಹಿತಿ ಪ್ರಕಾರ ಪ್ರಧಾನಿಯವರು ಎಲ್ಲಾ ಯೋಜನೆಗಳನ್ನು ಗೋಲ್ಡ್ಫಿಂಚ್ ಮೈದಾನದ ಕಾರ್ಯಕ್ರಮದ ಸ್ಥಳದಲ್ಲಿಯೇ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮದ ಸಿದ್ದತೆಗಳ ಕುರಿತು ಸಂಸದ ನಳಿನ್ಕುಮಾರ್ ಕಟೀಲು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮತ್ತು ಪೊಲೀಸ್ ಅಧಿಕಾರಿಗಳು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ.
ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಬದಲಾಗಿ ರಸ್ತೆ ಪ್ರಯಾಣವನ್ನೇ ಪ್ರಧಾನಿಯವರು ಬಯಸಿದ್ದಲ್ಲಿ ರಸ್ತೆ ವ್ಯವಸ್ಥೆ ಸರಿಯಾಗಿರಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ರಸ್ತೆಗಳನ್ನು ರಿಪೇರಿ ಮಾಡಲಾಗಿದೆ. ಬಜಪೆ ವಿಮಾನ ನಿಲ್ದಾಣದಿಂದ ಕೂಳೂರುವರೆಗಿನ ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಲಾಗಿದೆ.
ಒಂದು ವೇಳೆ ಪ್ರಧಾನಿ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಕೊನೆಕ್ಷಣದ ಬದಲಾವಣೆಗಳೇನಾದರೂ ಆದಲ್ಲಿ ಮುನ್ನೆಚ್ಚರಿಕೆ ಸಲುವಾಗಿ ಪ್ರಧಾನಿಯವರಿಗೆ ತಂಗಲು ಬೇಕಾದ ವ್ಯವಸ್ಥೆಗಳನ್ನೂ ಈಗಾಗಲೇ ಮಾಡಲಾಗಿದೆ. ಶಿಷ್ಟಾಚಾರದ ಪ್ರಕಾರ ಸರ್ಕ್ಯೂಟ್ ಹೌಸ್ ಮತ್ತು ಎನ್ಎಂಪಿಟಿ ಗೆಸ್ಟ್ ಹೌಸ್ಗಳಲ್ಲಿ ಈಗಾಗಲೇ ಪ್ರಧಾನಿಯವರಿಗೆ ತಂಗಲು ಬೇಕಾದ ವ್ಯವಸ್ಥೆಗಳನ್ನು ಪರಿಶೀಲಿಸಲಾಗಿದೆ.