ಬಂಟ್ವಾಳ, ಆ 27 (DaijiworldNews/HR): ಮಂಚಿ ಗ್ರಾಮ ಪಂಚಾಯತ್ ಆಡಳಿತ ನಡೆಸಿದ ಅಕ್ರಮ ಗೂಡಂಗಡಿ ತೆರವು ಕಾರ್ಯಾಚರಣೆಯಿಂದ ಮಾನಸಿಕವಾಗಿ ಉದ್ವೇಗಕ್ಕೆ ಒಳಗಾದ ಬಡ ವ್ಯಾಪಾರಿ ರಾಮಕೃಷ್ಣ ಕಾಮತ್ (50) ಅವರು ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಾದ ಘಟನೆ ನಡೆದಿದೆ.
ರಾಮಕೃಷ್ಣ ಕಾಮತ್ ಅವರು ಕುಕ್ಕಾಜೆ ಪೇಟೆಯ ಒಂದು ಬದಿಯಲ್ಲಿ ತಳ್ಳು ಗಾಡಿ ಇಟ್ಟು ಸಣ್ಣ ಪ್ರಮಾಣದಲ್ಲಿ ಕ್ಯಾಂಟೀನ್ ವ್ಯಾಪಾರ ನಡೆಸಿ ಜೀವನ ನಡೆಸುತ್ತಿದ್ದು, ಮಂಚಿ ಗ್ರಾಮ ಪಂಚಾಯತ್ ಯಾವುದೇ ಪೂರ್ವ ಪ್ರಕ್ರಿಯೆ ನಡೆಸದೆ ಏಕಾಏಕಿ ಕಾಮತ್ ಅವರ ಕ್ಯಾಂಟೀನ್ ತಳ್ಳುಗಾಡಿಯನ್ನು ತೆರವುಗೊಳಿಸಿ ಪಂಚಾಯತ್ ಆವರಣದಲ್ಲಿ ತಂದು ನಿಲ್ಲಿಸಿದ್ದಾರೆ. ಇದರಿಂದ ಮಾನಸಿಕವಾಗಿ ತೀವ್ರ ಉದ್ವೇಗಕ್ಕೆ ಒಳಗಾಗಿ ಹಠಾತ್ ತೀವ್ರ ರಕ್ತದೊತ್ತಡ ಅನಾರೋಗ್ಯಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ.
ಇದೇ ಪಂಚಾಯತ್ ವ್ಯಾಪ್ತಿಯಲ್ಲಿ ಅದೆಷ್ಟೋ ಅಕ್ರಮ ವ್ಯವಹಾರ ನಡೆಸುತ್ತಿದ್ದರೂ ಕ್ರಮ ಜರುಗಿಸದ ಆಡಳಿತ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದಾರೆ ಎಂದು ಸ್ಥಳೀಯರು ಪಂಚಾಯತ್ ಆಡಳಿತ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ತಾಣಗಳಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.