ಕಾಸರಗೋಡು, ಆ 26 (DaijiworldNews/HR): ಬೇಕಲ ಸಮೀಪದ ಕೋಟಿಕುಳಂನಲ್ಲಿ ಕೇರಳದ ಕಾಸರಗೋಡಿನ ಬಳಿ ರೈಲ್ವೆ ಹಳಿಗಳ ಮೇಲೆ ಕಾಂಕ್ರೀಟ್ ತುಂಡು ಇಟ್ಟು ರೈಲನ್ನು ಹಳಿಗಳಿಂದ ತಪ್ಪಿಸಲು ಕಿಡಿಗೇಡಿಗಳು ಯತ್ನಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ರೈಲ್ವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕಾಸರಗೋಡಿನ ಕೋಟಿಕುಳಂ ಮತ್ತು ಬೇಕಲ ನಡುವಿನ ರೈಲ್ವೆ ಹಳಿಗಳ ಮೇಲೆ ಕಿಡಿಗೇಡಿಗಳು ದಿನಗಳ ಹಿಂದೆ ಕಬ್ಬಿಣದ ಸರಳುಗಳು, ಕಾಂಕ್ರೀಟ್ ಕಲ್ಲುಗಳನ್ನಿಟ್ಟು ರೈಲು ಹಳಿ ತಪ್ಪಿಸಲು ಯತ್ನಿಸಲಾಗಿತ್ತು. ರೈಲ್ವೆ ಗಾರ್ಡ್ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿತ್ತು.
ಆರ್ಪಿಎಫ್ನ ಪಾಲಕ್ಕಾಡ್ ವಲಯ ಭದ್ರತಾ ಆಯುಕ್ತ ಜಿತಿನ್ ಬಿ. ರಾಜ್ ನೇತೃತ್ವದ ತಂಡವು ಕೋಟಿಕುಳಂಗೆ ಆಗಮಿಸಿ ಮಾಹಿತಿ ಕಲೆ ಹಾಕಿದ್ದು, ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದಾರೆ.
ಇದಲ್ಲದೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಇಂತಹುದೇ ಕೃತ್ಯ ನಡೆದಿದ್ದು, ಚಿತ್ತಾರಿ ಎಂಬಲ್ಲಿ ಕೊಯಂಬತ್ತೂರು ಮಂಗಳೂರು ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದು ಪರಾರಿಯಾಗಿದ್ದರು.
ಕುಂಬಳೆ ಬಳಿ ಹಳಿಯಲ್ಲಿ ಕಲ್ಲುಗಳನ್ನು ಇಡಲಾಗಿತ್ತು. ರೈಲ್ವೆ ಸಿಬಂದಿಗಳ ಸಮಯಪ್ರಜ್ಞೆಯಿಂದ ಅಪಾಯ ತಪ್ಪಿಹೋಗಿತ್ತು.