ಉಡುಪಿ, ಆ 26 (DaijiworldNews/HR): ಅಕ್ರಮ ನಿರ್ಮಾಣದ ನೆಪದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಡ ಮೀನುಗಾರರ ಶೆಡ್ ಅನ್ನು ನಗರ ಸಭೆ ಉರುಳಿಸಿರುವ ಘಟನೆ ಉಡುಪಿಯ ಕಿನ್ನಿಮುಲ್ಕಿ ಸ್ವಾಗತ ಗೋಪುರ ಬಳಿ ನಡೆದಿದೆ.
ಸ್ಥಳೀಯ ನಗರಸಭಾ ಸದಸ್ಯೆ ಅಮೃತ ಕೃಷ್ಣಮೂರ್ತಿ ಸ್ವಂತ ಖರ್ಚಿನಲ್ಲಿ ಶೆಡ್ ನಿರ್ಮಿಸಿದ್ದು, ನಿರ್ಮಾಣ ಹಂತದಲ್ಲಿರುವಾಗಲೇ ಜೆಸಿಬಿ ಬಳಸಿ ನಗರಸಭೆ ಕೆಡವಿ ಹಾಕಿದ್ದು, ನೋಟಿಸ್ ನೀಡದೆ ಶೆಡ್ ತೆರವು ಮಾಡಿದ್ದಕ್ಕೆ ನಗರಸಭೆ ವಿರುದ್ಧ ಸ್ಥಳೀಯರು, ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಮೂರ್ತಿ ಆಚಾರ್ಯ, ರಿಕ್ಷಾ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಶಕಗಳಿಂದ ಬೇಡಿಕೆ ಇಟ್ಟರೂ ನಗರಸಭೆ ಮೀನುಗಾರರಿಗೆ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹಾಗಾಗಿ ತಾತ್ಕಾಲಿಕ ನೆಲೆಯಲ್ಲಿ ನಗರಸಭಾ ಸದಸ್ಯೆ ಶೆಡ್ ನಿರ್ಮಾಣಕ್ಕೆ ಮುಂದಾಗಿದ್ದು, ಕಟ್ಟಡ ಸಾಮಾಗ್ರಿಗಳನ್ನು ಬಳಸಿಕೊಳ್ಳಲು ಅವಕಾಶವಿಲ್ಲದಂತೆ ಶೆಡ್ ಕೆಡವಿ ಹಾಕಿದ್ದಾರೆ.
ಇನ್ನು ನಗರಸಭಾ ಅಧಿಕಾರಿ ಯಶವಂತ್ ಪ್ರಭು ನೇತೃತ್ವದಲ್ಲಿ ಕಾರ್ಯಾಚರಣೆಗೆ ನಗರಸಭೆ ಬಂದಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿದ್ದು, ಮಲ್ಪೆ ಪೋಲಿಸರಿಂದ ಸ್ಥಳದಲ್ಲಿ ಬಿಗು ಪೋಲಿಸ್ ಬಂದೋ ಬಸ್ತ್ ಮಾಡಲಾಗಿದೆ.