ಬೈಂದೂರು, ಆ 26 (DaijiworldNews/HR): ಬೈಂದೂರು ಕ್ಷೇತ್ರ ಹಾಗೂ ಸಮಸ್ತ ಜನತೆಯ ಸುಭಿಕ್ಷೆಗಾಗಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ನೇತೃತ್ವದಲ್ಲಿ ಕೊಲ್ಲೂರಿನಲ್ಲಿ ಶತಚಂಡಿಕಾ ಯಾಗದ ಪೂರ್ಣಾಹುತಿ ಶುಕ್ರವಾರ ನಡೆಯಿತು.
ಕಳೆದ ನಾಲ್ಕು ದಿನಗಳಿಂದ ಕಾಳಿದಾಸ ಭಟ್ಟರ ಮನೆಯಲ್ಲಿ ಶತಚಂಡಿಕಾ ಯಾಗ ನಡೆಯುತ್ತಿದ್ದು, ಶುಕ್ರವಾರ ಪೂರ್ಣಾಹುತಿ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಬೈಂದೂರು ಕ್ಷೇತ್ರದ ಸುಭಿಕ್ಷೆ, ಅಭಿವೃದ್ದಿಗಾಗಿ ಈ ಶತಚಂಡಿಕಾ ಯಾಗ ಮಾಡಿದ್ದೇನೆ. ಇತ್ತೀಚೆಗೆ ಕ್ಷೇತ್ರದಲ್ಲಿ ಸಂಭವಿಸಿದ ಅವಘಡಗಳು, ಪ್ರಾಣಹಾನಿ, ಇತ್ಯಾದಿಗಳಿಂದ ಮನಸ್ಸಿಗೆ ಸಾಕಷ್ಟು ನೋವಾಗಿತ್ತು. ಮಾನಸಿಕ ನೆಮ್ಮದಿಗಾಗಿ ದೇವಿಯ ಮೊರೆ ಹೋಗಿದ್ದು, ಕಾಳಿದಾಸ ಭಟ್ಟ ವೈದಿಕತ್ವದಲ್ಲಿ ಶತಚಂಡಿಕಾ ಯಾಗ ಪೂರ್ಣಗೊಂಡಿದೆ ಎಂದರು.
ಕಾಳಿದಾಸ ಭಟ್ಟ ತಂದೆ ಗಣೇಶ ಭಟ್ಟರು ಆಧ್ಯಾತ್ಮಿಕವಾಗಿ ಸಾಕಷ್ಟು ಸಾಧನೆ ಮಾಡಿದವರು. ಈ ಯಾಗ ಮಾಡಲೂ ಅವರು ಪ್ರೇರಣೆ. ಕಾಳಿದಾಸ ಭಟ್ಟರ ಮನೆಯಲ್ಲಿ ಇದು 9ನೇ ಶತಚಂಡಿಕಾ ಯಾಗ. ಎಂ.ಜಿ ರಾಮಚಂದ್ರನವರು ಇಲ್ಲಿ ಶತಚಂಡಿಕಾ ಯಾಗ ಮಾಡಿದ್ದರು ಎಂದು ಅವರು ಹೇಳಿದರು.
ಶತಚಂಡಿಕಾ ಯಾಗದ ವೈದಿಕತ್ವ ವಹಿಸಿದ ವೇ.ಮೂ.ಕಾಳಿದಾಸ ಭಟ್ಟರು ಮಾತನಾಡಿ ಇದು ನಾಲ್ಕು ದಿನಗಳಿಂದ ನಡೆಯುತ್ತಿರುವ ಯಾಗವಾಗಿದ್ದು, ಪಂಚಜನ ಪ್ರಕಾರ ಮಾಡಿದರೆ ಪುಷ್ಠಿ ಜಾಸ್ತಿ, ಅಂಬಿಕೆಯನ್ನು ಪ್ರಧಾನವಾಗಿಟ್ಟುಕೊಂಡು ಎಲ್ಲ ದೇವತೆಗಳಿಗೆ ಉಪಹವನಗಳನ್ನು ಪೂರೈಸಿಕೊಂಡು ಇವತ್ತು ಚಂಡಿಕಾ ಯಾಗವನ್ನು ಸಂಪನ್ನಗೊಳಿಸಿದ್ದೇವೆ. ಇದರಿಂದ ದೇಶ, ಕ್ಷೇತ್ರ ಸಮಾಸ್ತರಿಗೂ ಒಳಿತಾಗಲಿ ಎಂದರು.
ಈ ಸಂದರ್ಭ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.