Karavali
ಕರಾವಳಿಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಕೆದಂಬಾಡಿ ರಾಮಯ್ಯ ಗೌಡರ ಪರಾಕ್ರಮದ ಕತೆಯೇ ರೋಚಕ
- Fri, Aug 26 2022 04:58:28 PM
-
ಮಂಗಳೂರು, ಆ 26 (DaijiworldNews/DB): ಮಂಗಳೂರಿನ ಬಾವುಟಗುಡ್ಡೆಯಲ್ಲಿ (ಟ್ಯಾಗೋರ್ ಉದ್ಯಾನವನ - ಸೈಂಟ್ ಅಲೋಶಿಯಸ್ ಕಾಲೇಜು ಎದುರುಗಡೆ) ಕೆದಂಬಾಡಿ ರಾಮಯ್ಯ ಗೌಡರ ಅದ್ಬುತ ಕಂಚಿನ ಪುತ್ಥಳಿ ಪ್ರತಿಷ್ಠಾಪನೆಯಾಗಲಿದೆ. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲೇ ದಕ್ಷಿಣ ಕನ್ನಡ ಜಿಲ್ಲೆಗೆ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ ಮಹಾನ್ ನಾಯಕನ ಪುತ್ಥಳಿ ಪ್ರತಿಷ್ಠಾಪನೆಗೆ ಜಿಲ್ಲೆಯಾದ್ಯಂತ ಸಂಭ್ರಮದ ತಯಾರಿಗಳು ನಡೆಯುತ್ತಿದ್ದು, ಆಗಸ್ಟ್ 29ರಂದು ಪುತ್ಥಳಿಯನ್ನು ಅದ್ದೂರಿಯಾಗಿ ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ1857ರಲ್ಲಿ ನಡೆದಿದೆ ಎಂದು ಉಲ್ಲೇಖಿಸಲಾಗಿದ್ದರೂ ಅದಕ್ಕೂ 20 ವರ್ಷ ಮೊದಲೇ ಬ್ರಿಟಿಷರ ದಾಸ್ಯದ ಪದ್ಧತಿಯನ್ನು ವಿರೋಧಿಸಿ, ದೇಶದಲ್ಲೇ ಮೊದಲ ಸ್ವಾತಂತ್ರ್ಯದ ರಣ ಕಹಳೆ ಮೊಳಗಿಸಿದ್ದ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಸುಳ್ಯದ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಯನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪಿಸಲು ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿಯು ಸರಕಾರಕ್ಕೆ ಮನವಿ ಮಾಡಿಕೊಂಡ ಮೇರೆಗೆ ಸರಕಾರದಿಂದ ಅನುಮೋದನೆ ದೊರಕಿ, ಇದೀಗ ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪುತ್ಥಳಿ ಅವರ ಹುಟ್ಟೂರು ಸುಳ್ಯಕ್ಕೆ ಆಗಸ್ಟ್ 29ರಂದು ಬರಲಿದೆ. ಆ ಪ್ರಯುಕ್ತ ಸುಳ್ಯದಿಂದ ಮಂಗಳೂರಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ.
11 ಅಡಿ ಉದ್ದದ ಪುತ್ಥಳಿ-ಅದ್ದೂರಿ ಸ್ವಾಗತ
ಈ ಪುತ್ಥಳಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಂಚಿನಿಂದ ತಯಾರಾಗಿದ್ದು ಇದರ ಎತ್ತರ ಸುಮಾರು 11 ಅಡಿ ಇದ್ದು ಚಿನ್ನದ ಬಣ್ಣದಿಂದ ಕೂಡಿದೆ. ಸಕಲ ಕಾರ್ಯಕ್ರಮಗಳ ಬಳಿಕ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಅನಾವರಣಗೊಳ್ಳಲಿದೆ. ಆಗಸ್ಟ್ 27ರಂದು ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ತಲುಪುವ ಪ್ರತಿಮೆ ಅಲ್ಲಿಂದ ಆಗಸ್ಟ್ 28ರಂದು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳಿಂದ ಚಾಲನೆ ದೊರೆತು ಸಂಜೆ ವೇಳೆ ಮಡಿಕೇರಿ ತಲುಪಲಿದೆ.ಆಗಸ್ಟ್ 29ರಂದು ಬೆಳಗ್ಗೆ 9 ಗಂಟೆಗೆ ಸಂಪಾಜೆ ಗೇಟಿನ ಬಳಿಗೆ ಬರಲಿದ್ದು ಪ್ರತಿಮೆ ಇರುವ ವಾಹನವನ್ನು ಬಹಳ ಅದ್ದೂರಿಯಿಂದ ಸ್ವಾಗತ ಮಾಡಲು ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಗದುದ್ದಕ್ಕೂ ಬೃಹತ್ ವಾಹನ ಜಾಥಾ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಸಚಿವರು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ಹಾಗೂ ಸಾರ್ವಜನಿಕರು ಈ ವೇಳೆ ಅಲ್ಲಿ ಜೊತೆಯಾಗಿ ಸ್ವಾಗತ ಕೋರಲಿದ್ದಾರೆ. ಬಳಿಕ ಸುಮಾರು 300ಕ್ಕೂ ಮಿಕ್ಕ ವಿವಿಧ ವಾಹನಗಳ ಜಾಥಾದ ಮೂಲಕ ಪ್ರತಿಮೆ ಸುಳ್ಯದತ್ತ ಬರಲಿದೆ.
ಗಾಂಧಿನಗರದ ಕಾಯರ್ತೋಡಿ ದೇವಸ್ಥಾನಕ್ಕೆ ತೆರಳುವ ಕೇಂದ್ರದಲ್ಲಿ ಉಬರಡ್ಕ ಮಿತ್ತೂರು ಜನತೆ ಹಾಗೂ ಕೆದಂಬಾಡಿ ಮನೆತನದವರಿಂದ ವಿಶೇಷ ಸ್ವಾಗತ ನೀಡುವ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮುನ್ನ ಅರಂತೋಡು, ಪೆರಾಜೆ ಕೇಂದ್ರಗಳಲ್ಲಿ ಪುಷ್ಪಾರ್ಚನೆ ಮಾಡಿ ಸ್ವಾಗತ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ನಲ್ಲಿ ಲೋಕಾರ್ಪಣೆ
ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ನೆಹರು ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಇತ್ತೀಚಿಗೆ ರಾಜ್ಯ ಪ್ರಶಸ್ತಿ ಪಡೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ ಕಿರು ನಾಟಕ ಪ್ರದರ್ಶನ ನಡೆಯಲಿದೆ. ಇದಾದ ಬಳಿಕ ಪೈಚಾರು, ಜಾಲ್ಸೂರು, ಕನಕಮಜಲು ಮಾರ್ಗದ ಮೂಲಕ ಪ್ರತಿಮೆ ಪುತ್ತೂರಿಗೆ ತೆರಳಲಿದೆ. ಬಳಿಕ ಮುಂದೆ ಸಾಗಿ, ಮಾಣಿ, ಬಿಸಿ ರೋಡ್, ಫರಂಗಿಪೇಟೆ ಮೂಲಕ ಸಂಜೆಯ ವೇಳೆಗೆ ಮಂಗಳೂರಿನ ಬಾವುಟ ಗುಡ್ಡೆಗೆ ಪ್ರತಿಮೆ ಆಗಮಿಸಲಿದೆ. ಇಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ರಾಮಯ್ಯ ಗೌಡರವರ ಕಂಚಿನ ಪುತ್ಥಳಿಗೆ ವಿಜೃಂಭಣೆಯ ಸ್ವಾಗತ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯು ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಬಾವುಟಗುಡ್ಡೆಯಲ್ಲಿ ಸ್ಥಾಪಿಸಲು ಅನುದಾನ ಮಂಜೂರು ಮಾಡಿ ಪ್ರತಿಮೆ ನಿರ್ಮಾಣ ಕಾರ್ಯ ಕೈಗೊಂಡಿದೆ. ಈಗಾಗಲೇ ಪ್ರತಿಮೆ ನಿರ್ಮಾಣ ಸ್ಥಳದ ಅಂಗಣದ ಮತ್ತು ಪ್ರತಿಮೆಯ ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ.
ಈ ಪ್ರತಿಮೆಯು ಅಕ್ಟೋಬರ್ ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ನಿತರ ಸಚಿವರು ಹಾಗೂ ಶಾಸಕರು ಆಗಮಿಸಲಿದ್ದಾರೆ. ಕೇಂದ್ರ ನಾಯಕರನ್ನೂ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಕೆದಂಬಾಡಿ ರಾಮಯ್ಯ ಗೌಡರ ಸ್ಮಾರಕ ರಚನೆ ಸಮಿತಿಯ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ತಿಳಿಸಿದ್ದಾರೆ.
ಪರಾಕ್ರಮದ ಹಿನ್ನೋಟ
1837ರಲ್ಲಿ ತುಳುನಾಡಿನ ವೀರ ರೈತರು ಬ್ರಿಟಿಷ್ ಕಂಪನಿಯ ರೈತ ವಿರೋಧಿ ಕಾರ್ಯಗಳ ವಿರುದ್ಧ ಹೋರಾಟ ನಡೆಸಿ ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿ ಸಮಸ್ತ ಕೆನರಾ ಜಿಲ್ಲೆಯ ಆಡಳಿತದ ಚುಕ್ಕಾಣಿ ಹಿಡಿದ ಈ ಹೋರಾಟ ನಮ್ಮ ಜಿಲ್ಲೆಯ ಜನ ಆತ್ಮಭಿಮಾನದಿಂದ ಬೀಗಬೇಕಾದ ಹೆಮ್ಮೆಯ ವಿಚಾರ. ಈ ಹೋರಾಟದ ಮುಖ್ಯ ರೂವಾರಿ ಕೆದಂಬಾಡಿಯ ರಾಮಯ್ಯ ಗೌಡರು. ಈ ಐತಿಹಾಸಿಕ ಹೋರಾಟ ನಮ್ಮ ಪವಿತ್ರ ನೆಲದಲ್ಲಿ ನಡೆದಿದ್ದು ಸಮಸ್ತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬರು ನೆನಪಿಡುವುದರ ಮೂಲಕ ಅವರ ತ್ಯಾಗ, ಬಲಿದಾನಕ್ಕೆ ನಾವು ಸಲ್ಲಿಸುವ ಕೃತಜ್ಞತೆ. ಕೆದಂಬಾಡಿ ರಾಮಯ್ಯ ಗೌಡರು ಒಬ್ಬ ಶ್ರೇಷ್ಠ ಸಂಘಟಕರಾಗಿದ್ದು ತನ್ನ ಅಸಾಧಾರಣ ಮತ್ತು ಅತ್ಯದ್ಭುತ ನಾಯಕತ್ವದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ 13 ದಿನಗಳಷ್ಟು ಕಾಲ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟು ತನ್ನ ಜೀವವನ್ನು ಅರ್ಪಣೆ ಮಾಡಿದ ವೀರೋದ್ಧಾತ ನಾಯಕರಾಗಿದ್ದರು. ಈ 13 ದಿನಗಳ ಆಡಳಿತ ಅವಧಿಯನ್ನು ಸ್ವತಂತ್ರ ಸ್ಥಾಪಿತ ಸರಕಾರ ಎಂದು ಉಲ್ಲೇಖಿಸಲಾಗಿದೆ.ಈ ಹೋರಾಟದ 20 ವರ್ಷಗಳ ನಂತರ ಜರಗಿದ 1857 ರಲ್ಲಿ ನಡೆದ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಬಿಂಬಿಸಿದ್ದು, 1837ರ ಹೋರಾಟ ಇತಿಹಾಸದ ಕಡೆಗಣನೆಗೆ ಒಳಗಾಗಿದೆ. ಪ್ರಮುಖವಾಗಿ ಹೋರಾಟ ಪ್ರಾರಂಭವಾಗಿರುವುದು ರೈತರ ಬೆಲೆಗೆ ಅತಿಯಾಗಿ ತೆರಿಗೆ ಹೇರಿರುವುದರಿಂದ 1837ರ ಮಾರ್ಚ್ 31ರಂದು ಬ್ರಿಟಿಷ್ ವಿರುದ್ಧ ಹೋರಾಟ ನಡೆಸುವ ಸಲುವಾಗಿ ಹೋರಾಟದ ಮಹಾನ್ ನಾಯಕ ಕೆದಂಬಾಡಿ ರಾಮಯ್ಯ ಗೌಡರಿಗೆ ಸೇರಿದ ಸುಳ್ಯದ ಮದುವೆಗದ್ದೆ ಎಂಬ ಸ್ಥಳದಲ್ಲಿ ಸುಮಾರು 2000ಕ್ಕಿಂತ ಹೆಚ್ಚು ರೈತಾಪಿ ಜನರನ್ನು ಸಂಘಟಿಸಿದ್ದು ಅದಕ್ಕೆ ಪೂರ್ವ ತಯಾರಿಯಾಗಿ ಸುಮಾರು 1500 ಖಡ್ಗವನ್ನು ಕೊಡ್ಲಿಪೇಟೆಯಿಂದ ತರಿಸಿದ್ದರು.
ಮದುವೆಗದ್ದೆಯಿಂದ ಹೊರಟ ದಂಡು ಬೆಳ್ಳಾರೆಯತ್ತ ಸಾಗುತ್ತದೆ. ಅಲ್ಲಿ ಸೈನ್ಯವು ಬ್ರಿಟಿಷ್ ಕಂಪೆನಿಯ ಖಜಾನೆಯನ್ನು ವಶಪಡಿಸಿ ನಾಲ್ಕು ತಂಡಗಳಾಗಿ ವಿಂಗಡಿಸಿ ಬೇರೆ ಬೇರೆ ಪ್ರದೇಶಕ್ಕೆ ಕಳುಹಿಸಲಾಗುತ್ತದೆ. ರಾಮಯ್ಯ ಗೌಡರ ನೇತೃತ್ವದ ಹೋರಾಟಗಾರರ ಮುಖ್ಯ ದಂಡು ಪುತ್ತೂರನ್ನು ವಶಪಡಿಸಿ ಮಂಗಳೂರಿನತ್ತ ಮುನ್ನಡೆಯುತ್ತದೆ. ಪುತ್ತೂರಿನಲ್ಲಿ ರೈತ ಹೋರಾಟಗಾರರ ಬೃಹತ್ ದಂಡನ್ನು ಕಣ್ಣಾರೆ ನೋಡಿದ ಕ್ಯಾಪ್ಟನ್ ಲೆವಿನ್ ಯುದ್ಧ ನಡೆಸಲು ಎದೆಗಾರಿಕೆಯಿಲ್ಲದೆ ಮಂಗಳೂರನ್ನು ರಕ್ಷಿಸುವುದು ಮುಖ್ಯವೆಂದು ಬಗೆದು ಯಾವ ಪ್ರತಿರೋಧ ತೋರದೆ ಮಂಗಳೂರಿಗೆ ಹಿಂತಿರುಗಿದರು.
ಹೋರಾಟದ ಸೈನ್ಯವು ಮಂಗಳೂರಿನ ಕಡೆ ಸಾಗುತ್ತಿದ್ದಂತೆ ಅದಕ್ಕೆ ದಾರಿಯುದ್ದಕ್ಕೂ ಆಪಾರವಾದ ಜನಬೆಂಬಲ, ಪ್ರೋತ್ಸಾಹ, ನೆರವು ಮತ್ತು ಸಹಭಾಗಿತ್ವ ದೊರಕುತ್ತದೆ. ದಂಡಿನ ಗಾತ್ರ ವಿಶಾಲವಾಗಿ ಹಿಗ್ಗುತ್ತದೆ. ಧರ್ಮಸ್ಥಳದ ಆಗಿನ ಧರ್ಮಾಧಿಕಾರಿ ಮಂಜಯ್ಯ ಹೆಗ್ಗಡೆ ಫಿರಂಗಿ, ಕುದುರೆ ಹಾಗೂ ಅಪಾರ ಪ್ರಮಾಣದ ಹಣವನ್ನು ನೀಡುತ್ತಾರೆ. ನಂದಾವರದಲ್ಲಿದ್ದ ಬಂಗಾಡಿ ಅರಸು ಮನೆತನದ ಲಕ್ಷಪ್ಪ ಬಂಗರಸ ದೊಡ್ಡ ಸಂಖ್ಯೆಯ ಯೋಧರೊಂದಿಗೆ ನೇರವಾಗಿ ಯುದ್ಧಕ್ಷೇತ್ರಕ್ಕೆ ಧಾವಿಸುತ್ತಾರೆ. ಉಪ್ಪಿನಂಗಡಿಯಲ್ಲಿ ಕಂಪನಿಯ ಉದ್ಯೋಗಿ ಮಂಜ ದಂಡಿಗೆ ಜನರನ್ನು ಜಮಾವಣೆಗೊಳಿಸುತ್ತಾರೆ. ಹೋರಾಟದೊಂದಿಗೆ ಮಂಗಳೂರಿಗೆ ಆಗಮಿಸಿದ ರೈತ ಹೋರಾಟಗಾರರು ಬ್ರಿಟಿಷ್ ಸೇನೆಗೆ ಬಹಳ ದೊಡ್ಡ ಪ್ರತಿರೋಧ ಒಡ್ಡಿದರು. ರಾತ್ರೋರಾತ್ರಿ ಹೆದರಿದ ಬ್ರಿಟಿಷ್ ಅಧಿಕಾರಿಗಳು ಕಣ್ಣಿನೂರಿಗೆ ಪಲಾಯನ ಮಾಡಿದರು. ಏಪ್ರಿಲ್ 5ರಂದು ಮಂಗಳೂರನ್ನು ವಶಪಡಿಸಿದ ಹೋರಾಟಗಾರರು ಬಾವುಟಗುಡ್ಡೆಯ ಬ್ರಿಟಿಷ್ ನಿಯಂತ್ರಣದ ಸ್ಥಳವಾದ ಲೈಟ್ ಹೌಸ್ ಪ್ರದೇಶದ ಬ್ರಿಟಿಷ್ ಬಂಗಲೆಗಳಿಗೆ ಬೆಂಕಿ ಹಚ್ಚಿದರು. ಅಲ್ಲಿನ ಈಸ್ಟ್ ಇಂಡಿಯಾ ಕಂಪನಿಯ ಬಾವುಟವನ್ನು ಕಿತ್ತೆಸೆದು ರಾಜ ಲಾಂಛನದ ಬಾವುಟವನ್ನು ಹಾರಿಸಿ ಮಂಗಳೂರು ಸ್ವತಂತ್ರಗೊಂಡ ಬಗ್ಗೆ ಸಂಭ್ರಮವನ್ನು ಆಚರಿಸಿದ್ದರು ಹಾಗೂ 13 ದಿನಗಳ ಕಾಲ ರಾಜ್ಯಭಾರ ಮಾಡಿದ್ದರು. ಆದ್ದರಿಂದ ಈ ಪ್ರದೇಶಕ್ಕೆ ಬಾವುಟಗುಡ್ಡೆ ಎಂಬ ಹೆಸರು ಬಂದಿದೆ.
ಬ್ರಿಟಿಷರ ವಿರುದ್ದ ಸಿಡಿದೆದ್ದ ವೀರ
ರಾಮಯ್ಯಗೌಡ ನೇತೃತ್ವದಲ್ಲಿ ಹೋರಾಟಗಾರರು ತಮ್ಮದೊಂದು ಸ್ಥಾಪಿತ ಸರಕಾರವೆಂದು ಬಹಳ ಪ್ರಬುದ್ಧವಾಗಿ ನಡೆದುಕೊಂಡರು. ಮಂಗಳೂರಿನ ನಿವಾಸಿಗಳಿಗೆ ಸಾಹುಕಾರರಿಗೆ 5 ನೇ ಏಪ್ರಿಲ್ 1837ರಂದು ಪತ್ರ ಬರೆದು ಎಲ್ಲರೂ ಸ್ಥಾಪಿತ ಸರಕಾರದ ಜೊತೆ ಕೈ ಜೋಡಿಸಬೇಕೆಂದು ಕರೆ ನೀಡಲಾಯಿತು. ಹಾಗೆಯೇ ಈ ಭಾಗದ ಜನರಿಗೆ ಅನುಕೂಲವಾಗುವಂತೆ ತೆರಿಗೆ ಮನ್ನಾ ಮಾಡಲಾಯಿತು. 6ನೇ ದಿವಸ ಮಂಗಳೂರಿನ ಸಹಾಯಕ್ಕೆ ಮುಂಬಯಿ, ಗೋವಾ, ಕಣ್ಣನೂರುನಿಂದ ಬಂದ ಸುಸಜ್ಜಿತ ಬ್ರಿಟಿಷ್ ಸೈನ್ಯಕ್ಕೂ, ರೈತ ಹೋರಾಟಗಾರರಿಗೂ ರಕ್ತ ಸಿಕ್ತ ಹೋರಾಟ ನಡೆದು ಹೋರಾಟಗಾರರಿಗೆ ಮಂಗಳೂರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಮಯ್ಯಗೌಡರು ಸೇರಿದಂತೆ ಪ್ರಮುಖ ನಾಯಕರುಗಳು ಬ್ರಿಟಿಷರ ಕೈವಶರಾದರು. ಒಟ್ಟು 1115 ಜನರನ್ನು ಬಂಧಿಸಲಾಯಿತು.ಮಂಗಳೂರಿನಲ್ಲಿ ಕಲ್ಯಾಣ ಸ್ವಾಮಿ (ಪುಟ್ಟ ಬಸಪ್ಪ) ಉಪ್ಪಿನಂಗಡಿ ಮಂಜ, ಲಕ್ಷ್ಮಪ್ಪ ಬಂಗರಸ ಬಂಟ ಆದಿಯಾಗಿ ಹಲವಾರು ಮುಖಂಡರುಗಳನ್ನು ಅರಳಿ ಮರಕ್ಕೆ ನೇಣುಹಾಕಿ ಕೆಲವು ದಿನ ಅಲ್ಲೇ ಇರಿಸಿ ಹದ್ದುಗಳಿಗೆ ತಿನ್ನಲು ಬಿಟ್ಟ ಭೀಕರ ಘಟನೆ ನಡೆದಿದ್ದು, ಆದ್ದರಿಂದ ಈ ಸ್ಥಳಕ್ಕೆ ಭೀಕರವಾದ ಕಟ್ಟೆ ಮುಂದೆ ಬಿಕರ್ನಕಟ್ಟೆ ಎಂದು ಹೆಸರಿಸಲಾಯಿತು. ರಾಜವೇಷದೊಂದಿಗೆ ಹೋರಾಟದಲ್ಲಿ ರಾಜನಾಗಿ ಬಂದ ಪುಟ್ಟಬಸಪ್ಪ (ಕಲ್ಯಾಣಸ್ವಾಮಿ) ಬಿಕರ್ನಕಟ್ಟೆಯಲ್ಲಿ ಗಲ್ಲು ಶಿಕ್ಷೆಗೆ ಒಳಗದಾಗ ನಾನು ಕೆದಂಬಾಡಿ ರಾಮಯ್ಯ ಗೌಡರ ನಿರ್ದೇಶನದಂತೆ ಈ ಹೋರಾಟದಲ್ಲಿ ರಾಜವೇಷವನ್ನು ಧರಿಸಿದೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಅಂಗಲಾಚಿದ್ದರು. ಆದರೂ ಗಲ್ಲು ಶಿಕ್ಷೆಗೆ ಒಳಗಾಗುತ್ತಾರೆ.
ಬ್ರಿಟಿಷರು ಬಹಳ ಜಾಣತನದಿಂದ ಹೋರಾಟವನ್ನು ಸಂಪೂರ್ಣವಾಗಿ ಮಟ್ಟಹಾಕಿ ಸಮಾಧಿ ಮಾಡಿದಂತೆ ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ, ಚೆಟ್ಟಿ ಕುಡಿಯ, ಕುಕ್ಕುನೂರು, ಚೆನ್ನಯ್ಯ, ಕೂಜುಗೋಡು ಮಲ್ಲಪ್ಪ ಗೌಡ, ಬೀರಣ್ಣ, ಬಂಟ, ಕಾರಕಾರ ಸುಬೇದಾ ಕೃಷ್ಣಯ್ಯ, ಗುಡ್ಡಮನ ತಮ್ಮಯ್ಯ ಮೊದಲಾದವರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ಸಮುದ್ರದಾಚೆಗಿನ ಊರುಗಳಿಗೆ ಸಾಗಹಾಕಿ ಜೀವನದುದ್ದಕ್ಕೂ ಕೈಕಾಲುಗಳಿಗೆ ಕೋಳ ಮತ್ತು ಸಂಕೋಲೆ ತೊಡಿಸಿ ಘೋರವಾದ ಶಿಕ್ಷೆಯನ್ನು ಕೊಟ್ಟಿದ್ದರು.
ಉಳುವಾರು ಕೃಷ್ಣ, ಗೌಡಳ್ಳಿ ಸುಬ್ಬಷ್ಟು, ಕುಟ್ಟಿ ಸುಬ್ಬ, ಶೇಕ್, ದೇರಾಜೆ ಬಚ್ಚ ಪಟೇಲ, ನೆಡುಂಪಳ್ಳಿ ದೇವಪ್ಪ ರೈ, ಗುಂಡ ಸುಬ್ಬಪ್ಪ ಮತ್ತು ಇತರ ಕೆಲವರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಇನ್ನು ಹಲವು ಮಂದಿಗೆ 14 ವರ್ಷ, 10 ವರ್ಷ ಮತ್ತು 7 ವರ್ಷಗಳ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ. ಮಾನ್ಯದ ರಂಗಪ್ಪ ರಣರಂಗದಲ್ಲಿ ಮೃತ ಪಟ್ಟರೆ, ಚರಂಜಿ ಸುಬ್ರಾಯ ಗಾಯಾಳುವಾಗಿ ಸೆರೆ ಸಿಕ್ಕಾಗ ಜೈಲಿನಲ್ಲಿ ಸಾವನ್ನಪ್ಪುತ್ತಾರೆ. ಮಹಾನ್ ಸಂಚುಕೋರ ಹುಲಿಕಂದ ನಂಜಯ್ಯನ ಬಗ್ಗೆ ಯಾವುದೇ ಸುಳಿವು ಸಿಗುವುದಿಲ್ಲ.
ತುಳುನಾಡಿನ ಹಳ್ಳಿಯಲ್ಲಿ ಹುಟ್ಟಿ ಸಾಮಾಜ್ಯಶಾಹಿ ಬ್ರಿಟಿಷರ ವಿರುದ್ಧ ಸಿಡಿದ್ದೆದ್ದು, ಇಂದಿನ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಸಂಪೂರ್ಣವಾಗಿ ಮತ್ತು ಉಡುಪಿ ಹಾಗೂ ಕೊಡಗು ಜಿಲ್ಲೆಗಳನ್ನು ಭಾಗಶಃ ಗೆದ್ದು, ತನ್ನ ಅಸಾಧಾರಣ ಮತ್ತು ಅತ್ಯದ್ಭುತ ಮುಂದಾಳುತನದ ಮೂಲಕ ಈ ಭೂಪ್ರದೇಶಕ್ಕೆ ಎರಡು ವಾರಗಳಷ್ಟು ಕಾಲ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಧೀರೋದಾತ್ತ ನಾಯಕ ಕೆದಂಬಾಡಿ ರಾಮಯ್ಯ ಗೌಡ ಮತ್ತವರ ಕುಟುಂಬವರ್ಗ ಕೊನೆಗೆ ಯಾವುದೋ ಗುರುತು ಪರಿಚಯವಿಲ್ಲದ ಕಡಲಿನಾಚೆಗಿನ ಪರದೇಶದಲ್ಲಿ ತಮ್ಮ ಜೀವನದ ಅಂತ್ಯವನ್ನು ಕಾಣುವಂತಾಯಿತು. ಇವರುಗಳಲ್ಲದೆ ಇನ್ನೂ ಹಲವು ಜನ ದಾಸ್ಯದ ಶೃಂಖಲೆಯನ್ನು ಕಳಚುವ ಅದ್ಭುತ ಕನಸುಗಳನ್ನು ನನಸಾಗಿಸಲು ಪಣತೊಟ್ಟು ತಮ್ಮದೆಲ್ಲವನ್ನು ನಾಡಿಗಾಗಿ ತ್ಯಾಗ ಮಾಡಿದ್ದಾರೆ.