ಕಾರ್ಕಳ, ಅ 26(DaijiworldNews/MS): ನಾಮನಿರ್ದೇಶಿತ ಸದಸ್ಯರು ಪುರಸಭೆಯನ್ನು ಪ್ರತಿನಿಧಿಸುವ ಸದಸ್ಯರ ಗಮನಕ್ಕೆ ತಂದು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು ಎಂದು ನಿರ್ಣಯ ಬರೆದಿರುವುದಕ್ಕೆ ಬಾರೀ ಆಕ್ಷೇಪ ವ್ಯಕ್ತವಾಗಿದೆ.
ಪುರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಶೋಭ ದೇವಾಡಿಗ ಹಿಂದಿನ ಮಾಹೆಯಲ್ಲಿ ಕೈಗೊಂಡ ನಿರ್ಣಯ ತಪ್ಪಾಗಿದ್ದು, ಇದಕ್ಕೆ ಪುರಸಭೆ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳು ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದರು. ಪುರಸಭೆ ಕಾಯ್ದೆಯ ಪ್ರಕಾರ ನಾಮನಿರ್ದೇಶಿತ ಸದಸ್ಯರ ಅರ್ಜಿಗಳನ್ನು ಅಜೆಂಡಾಕ್ಕೆ ತರಬೇಕ ಅಥವಾ ತರಬಾರದೆ ಎಂಬುವುದರ ಬಗ್ಗೆ ಸ್ಪಷ್ಟನೆ ಇಲ್ಲ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.
ನಾಮನಿರ್ದೇಶಿತ ಸದಸ್ಯರಾದ ಸಂತೋಷ್ರಾವ್, ಪ್ರಸನ್ನ ದಾನಶಾಲೆ, ಸಂಧ್ಯಾ ಮಲ್ಯ, ಅಶೋಕ್ ಸುವರ್ಣ ಹಾಗೂ ಅವಿನಾಶ್ ಶೆಟ್ಟಿ ಮುಂತಾದವರು ಆಕ್ಷೇಪ ವ್ಯಕ್ತಪಡಿಸಿ, ಈ ಹಿಂದೆ ನಾಮನಿರ್ದೇಶಿತರಿಗೆ ಅಧಿಕಾರವಿತ್ತು. ಇದೀಗ ಕಸಿಯಲಾಗುತ್ತಿದೆ ಎಂದು ಆರೋಪಿಸಿದರು. ಸಂತೋಷ್ ರಾವ್ ಮಾತನಾಡಿ, ಬೇರೆ ಪುರಸಭೆಗಳಲ್ಲಿ ನಾಮನಿರ್ದೇಶಿತರಿಗೆ ಅಧಿಕಾರವಿದೆ. ಇಲ್ಲಿ ಮಾತ್ರ ಕಸಿಯಲಾಗುತ್ತಿದೆ ಎಂದು ಆರೋಪಿಸಿದರು. ಶುಭದ ರಾವ್ ಮಾತನಾಡಿ, ಬೇರೆ ಯಾವ ಪುರಸಭೆಗಳಲ್ಲಿ ಅಧಿಕಾರವಿದೆ ಎನ್ನುವುದನ್ನು ಸಾಬೀತುಪಡಿಸಿ ಎಂದು ಆಗ್ರಹಿಸಿ ಸದನದಲ್ಲಿ ಧರಣಿ ಆರಂಭಿಸಿದರು. ಪ್ರತಿಪಕ್ಷದ ಸದಸ್ಯರು ಕೂಡಾ ಬೆಂಬಲ ಸೂಚಿಸಿದರು. ಅಶ್ಪಕ್ ಅಹ್ಮದ್ ಮಾತನಾಡಿ, ಈ ಬಗ್ಗೆ ಸ್ಪಷ್ಟನೆಯನ್ನು ಜಿಲ್ಲಾಧಿಕಾರಿಗಳಿಂದ ತರಿಸಿಕೊಳ್ಳಿ ಎಂದರು.
ಜಿಲ್ಲಾಧಿಕಾರಿಗಳಿಂದ ಸ್ಪಷ್ಟನೆ ಬರುವವರೆಗೆ ನಮ್ಮ ಅರ್ಜಿಗಳನ್ನು ಅಜೆಂಡದಲ್ಲಿಡಬೇಕು ಎಂದು ನಾಮನಿರ್ದೇಶಿತರು ಪಟ್ಟು ಹಿಡಿದರು. ಬಳಿಕ ಅಧ್ಯಕ್ಷರು ಜಿಲ್ಲಾಧಿಕಾರಿಗಳಿಂದ ಸ್ಪಷ್ಟನೆ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ ಬಳಿಕ ಪ್ರತಿಪಕ್ಷದ ಸದಸ್ಯರು ಧರಣಿ ವಾಪಾಸ್ ಪಡೆದರು. ಪ್ರಾಕೃತಿಕ ವಿಕೋಪದಡಿ ಅನುದಾನವೇ ಪುರಸಭೆಗೆ ಬಂದಿಲ್ಲ ಎಂದು ಅಶ್ಪಕ್ ಅಹ್ಮದ್ ಆರೋಪಿಸಿದರು. ವಿನ್ನಿಬೋಲ್ಡ್ ಮಾತನಾಡಿ ಜಿಲ್ಲಾಧಿಕಾರಿಗಳು ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್ ವಾಸ್ತವ್ಯ ಹೂಡುವ ಮೂಲಕ ಜನರ ಸಮಸ್ಯೆಯನ್ನು ಆಲಿಸಬೇಕು ಎಂದರು. ಕಾಬೆಟ್ಟು ಬಳಿಕ ಹೈಮಾಸ್ಟ್ ದೀಪ ಸರಿಪಡಿಸುವಂತೆ ರೆಹಮತ್ ಆಗ್ರಹಿಸಿದರು. ಪ್ರತಿಮ ರಾಣೆ ಮಾತನಾಡಿ, ರಸ್ತೆಗಳಿಗೆ ನಾಮಫಲಕ ಅಳವಡಿಸುವಂತೆ ಆಗ್ರಹಿಸಿದರು. ವಾರ್ಡ್ನಲ್ಲಿರುವ ಪಾಳು ಬಿದ್ದ ಅಂಗನವಾಡಿ ಕೇಂದ್ರವನ್ನು ಇತರ ಉದ್ದೇಶಕ್ಕೆ ಬಳಸುವುವಂತೆ ಶಶಿಕಲಾ ಶೆಟ್ಟಿ ಆಗ್ರಹಿಸಿದರು.
ಅನಧಿಕೃತ ಕಟ್ಟಡ :
ಅನಂತಶಯನದ ಬಳಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದ ವಿರುದ್ದ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಸೋಮನಾಥ ನಾಯ್ಕ ಆಗ್ರಹಿಸಿದರು. ಉಖ್ಯಾಧಿಕಾರಿ ರೂಪಾ ಶೆಟ್ಟಿ ಮಾತನಾಡಿ, ಈ ಕಟ್ಟಡದ ಕುರಿತಂತೆ ಈಗಾಗಲೇ ಮೂರು ನೋಟೀಸ್ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ನಿರ್ದೇಶನ ಪಡೆದು ಕ್ರಮ ಕೈಗೊಳ್ಳುವೆ. ಅಲ್ಲದೆ ಇದು ಪ್ರಾಚ್ಯ ಇಲಾಖೆಯ ಅಧೀನದಲ್ಲಿ ಬರುವುದರಿಂದ ನನ್ನ ಅಧಿಕಾರ ಏನಿದೆ ಅದನ್ನು ಚಲಾಯಿಸಿದ್ದೇನೆ ಎಂದರು. ಸದಸ್ಯ ಸೋಮನಾಥ ಮಾತನಾಡಿ, ಪ್ರಾಚ್ಯ ಇಲಾಖೆಯ ಅಧಿಕಾರಿಗಳು ಅದು ಪುರಸಭೆಯ ಜವಾಬ್ದಾರಿ ಎಂದಿದ್ದಾರೆ. ಇಲ್ಲಿ ಬಡವರಿಗೊಂದು ಕಾನೂನು ಶ್ರೀಮಂತರಿಗೊಂದು ಕಾನೂನು ಎಂದು ಆರೋಪಿಸಿದರು. ಈ ಬಗ್ಗೆ ಕೂಡಲೇ ಅಕ್ರಮ ಕಟ್ಟಡವನ್ನು ನೆಲಸಮಗೊಳಿಬೇಕು ಎಂದು ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಸುಮಕೇಶವ್ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷೆ ಪಲ್ಲವಿ, ಸ್ಥಾಯಿ ಸಮಿತಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು.