ಸುಳ್ಯ, ಆ 26 (DaijiworldNews/DB): ರಸ್ತೆ ಸಂಪರ್ಕವಿಲ್ಲದ ಕಾರಣ ಮರದ ಬಡಿಗೆಗೆ ಸೀರೆ ಕಟ್ಟಿ ಅದರಲ್ಲಿ ಅನಾರೋಗ್ಯಪೀಡಿತ ವೃದ್ದೆಯನ್ನು ಹೊತ್ತೊಯ್ದ ಘಟನೆಗೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಅದೇ ವೃದ್ದೆಯ ಮನೆಯಿಂದ ಜೀಪು ಮೂಲಕ ತೆಂಗಿನಕಾಯಿ ಕೊಂಡೊಯ್ಯುವ ವೀಡಿಯೋ ವೈರಲ್ ಆಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲದ ಕಮಲಾ (70) ಎಂಬ ವೃದ್ದೆಯನ್ನು ಮರದ ಕಂಬಗಳಿಗೆ ಸೀರೆ ಕಟ್ಟಿ ಅದರಲ್ಲಿ ಮಲಗಿಸಿ ಚಿಕಿತ್ಸೆಗಾಗಿ ಕರೆದೊಯ್ಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ರಸ್ತೆ ವ್ಯವಸ್ಥೆ ಇಲ್ಲದ ಕಾರಣ ಆಂಬುಲೆನ್ಸ್ ಬರಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಆಡಳಿತ ವರ್ಗಕ್ಕೆ ತಲುಪಿಸುವ ಉದ್ದೇಶದಿಂದ ಈ ವೀಡಿಯೋ ಮಾಡಲಾಗಿತ್ತು. ಆದರೆ ಗುರುವಾರ ಅದೇ ಮನೆಗೆ ರಸ್ತೆಯಲ್ಲಿ ಜೀಪು ಹೋಗಿದ್ದು, ತೆಂಗಿನಕಾಯಿ ತುಂಬಿಸಿಕೊಂಡು ಹಿಂತಿರುಗಿದೆ. ಇದನ್ನು ಗಮನಿಸಿದ ಸ್ಥಳೀಯರು ಜೀಪು ಮನೆಗೆ ತೆರಳಿದ ಮತ್ತು ಹಿಂತಿರುಗಿದ ವೀಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ವಿಪರೀತ ಮಳೆ ಬಿದ್ದರೂ ಜೀಪು ಮನೆಯವರೆಗೆ ಬಂದು ತೆಂಗಿನಕಾಯಿ ಕೊಂಡೊಯ್ದಿದೆ. ಆದರೆ ವೃದ್ದೆಯನ್ನು ಮರದ ಕೊಂಬೆಯಲ್ಲಿ ಸಾಗಿಸಲಾಗಿದೆ. ಇದು ಸರಿಯಲ್ಲ ಎಂದು ಸ್ಥಳೀಯರು ಮನೆಯವರನ್ನು ಪ್ರಶ್ನಿಸುತ್ತಿರುವುದು ಕೂಡಾ ವೀಡಿಯೋದಲ್ಲಿ ದಾಖಲಾಗಿದೆ. ಇದೇ ವೇಳೆ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯರು ಕೂಡಾ ಕುಟುಂಬದ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.