ಮಂಜೇಶ್ವರ, ಆ 26 (DaijiworldNews/DB): ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಿಂದ ಪಂಚಲೋಹ ವಿಗ್ರಹ ಕಳವುಗೈದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ಬಂಧಿತ ಆರೋಪಿ ಹೊಸಂಗಡಿ ಬಳಿಯ ಮಜಿಬೈಲು ವಾಟೆಮಾರ್ ನಿವಾಸಿ ಲಕ್ಷ್ಮೀಶ ಭಂಡಾರಿ (39)ಗೆ ರಿಮಾಂಡ್ ವಿಧಿಸಲಾಗಿದ್ದು, ಹೆಚ್ಚಿನ ತನಿಖೆಗೆ ಈತನನ್ನು ಕಸ್ಟಡಿಗೆ ಪಡೆಯಲು ಪೊಲೀಸರು ನಿರ್ಧಾರ ಕೈಗೊಂಡಿದ್ದಾರೆ.
ಕ್ಷೇತ್ರದ ಕಾಣಿಕೆ ಹುಂಡಿಯಿಂದ ಎಗರಿಸಲಾದ ಹಣ ಹಾಗೂ ಕೃತ್ಯ ಎಸಗಲು ಬಳಸಿದ ದ್ವಿಚಕ್ರ ವಾಹನವನ್ನು ಈಗಾಗಲೇ ಪೊಲೀಸರು ಆರೋಪಿಯ ಮನೆಯಿಂದ ಪತ್ತೆ ಹಚ್ಚಿದ್ದಾರೆ. ಸದ್ಯದ ತನಿಖೆಯಲ್ಲಿ ಕೃತ್ಯದಲ್ಲಿ ಇತರರ ಭಾಗಿದಾರಿಕೆ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ನ ಜಿಲ್ಲಾ ಸಮಿತಿ ಕಚೇರಿಗೆ ನುಗ್ಗಿ ಕಳವಿಗೆತ್ನಿಸಿ ಹಾನಿ ಮಾಡಿರುವ ಪ್ರಕರಣವೂ ಈತನದ್ದೇ ಕೈಚಳಕ ಎಂದು ತಿಳಿದು ಬಂದಿದೆ. ಅಲ್ಲದೆ ಈ ಹಿಂದೆ ಮಂಗಳೂರು ಬ್ಯಾಂಕ್ವೊಂದರಲ್ಲಿ ಹಾಗೂ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಿದ ಆರೋಪಿಯೂ ಈತನೇ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಮಂಜೇಶ್ವರ ಮಾತ್ರವಲ್ಲದೆ, ಕರ್ನಾಟಕದಲ್ಲಿಯೂ ಈತನ ವಿರುದ್ದ ಪ್ರಕರಣ ದಾಖಲಾಗಿದೆ.