ಉಡುಪಿ, ಅ 26(DaijiworldNews/MS): ಉಡುಪಿ ಜಿಲ್ಲೆಗೆ ನೂತನ ಎಸ್ ಪಿ ಯಾಗಿ ಬಂದಿರುವ ಅಕ್ಷಯ್ ಮಚ್ಚಿಂದ ಅವರ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಕಾರ್ಯಪ್ರವರ್ತರಾಗಿದ್ದು, ಅದರಂತೆಯೇ ಗಾಂಜಾ ದಂಧೆಯ ಬೆನ್ನುಬಿದ್ದಿರುವ ಪೊಲೀಸರು ಅಲ್ಲಲ್ಲಿ ದಾಳಿ ನಡೆಸಿ ಗಾಂಜಾ ಸೇವಿಸುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೆ ಮಾದಕ ದ್ರವ್ಯದ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೆ 9 ಮಂದಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆ.19ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿ ಜಂಕ್ಷನ್ ಬಳಿ ನಿಯಾಜ್ ಅಹಮ್ಮದ್, ಆ.22ರಂದು ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಂಚಿನಡ್ಕ ಸುಬ್ಬಪ್ಪನ ಕಾಡು ಎಂಬಲ್ಲಿ ಮುಹಮ್ಮದ್ ತೌಫೀಕ್, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮಣೂರು ಗ್ರಾಮದ ಬಾಳೆಬೆಟ್ಟು ಬಸ್ ನಿಲ್ದಾಣ ಬಳಿ ನಿತಿನ್ ಆಚಾರಿ(31), ಆ.23ರಂದು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ 92ನೇ ಹೇರೂರು ಬಳಿ ಸಚಿನ್ (27), ಅಲ್ವಿನ್ ಅಲ್ಮೇಡಾ(27), ಶಿವಪ್ರಸಾದ(26), ನಬಿಲ್ ಸಾಮ್ಯ (26), ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ವ್ಯಾಪ್ತಿಯ ಅಲೆವೂರು ಗ್ರಾಮದ ಶೀಂಬ್ರಾ ಪ್ರಗತಿ ನಗರದ ಬಳಿ ನಾಗೇಶ ಮಡಿವಾಳ(29), ತನ್ಸಿಲ್(26) ಎಂಬವರನ್ನು ವಶಪಡಿಸಿಕೊಳ್ಳಲಾಗಿದೆ. ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆ.24ರಂದು ಇವರು ಗಾಂಜಾ ಸೇವಿಸಿರುವುದು ವರದಿಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.