ಬೈಂದೂರು, ಅ 26(DaijiworldNews/MS): ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಯೋರ್ವನಿಗೆ ರೈಲು ಢಿಕ್ಕಿಯಾಗಿ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನದ ವೇಳೆ ಶಿರೂರು ಗ್ರಾಮದ ನಿರೋಡಿ ಸಮೀಪ ನಡೆದಿದೆ.
ಶಿರೂರು ಮುದ್ರುಮಕ್ಕಿ ನಿವಾಸಿ ನರಸಿಂಹ ಪೂಜಾರಿ ಎಂಬುವವರ ಪುತ್ರ ಸಂಪತ್ ಪೂಜಾರಿ (17) ಮೃತ ದುರ್ದೈವಿ.
ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸಿಸುತ್ತಿದ್ದ ವಿದ್ಯಾರ್ಥಿ ಸಂಪತ್, ಮಧ್ಯಾಹ್ನ ವೇಳೆ ನಿರೋಡಿಯ ತನ್ನ ಅಜ್ಜಿಯ ಮನೆಯಿಂದ ಮುದ್ರುಮಕ್ಕಿಯ ತಂದೆಯ ಮನೆಗೆ ಹೋಗುವ ಸಲುವಾಗಿ ರೈಲು ಹಳಿಯ ಮೇಲೆ ತೆರಳಿದ್ದಾನೆ.
ಈ ವೇಳೆ ಹೆಡ್ ಪೋನ್ ಹಾಕಿಕೊಂಡಿದ್ದರಿಂದ ರೈಲು ಹಿಂದಿನಿಂದ ಬಂದಿರುವುದು ತಿಳಿಯದೇ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಆ.೨೬ ರಂದು ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದುದರಿಂದ ಗುರುವಾರ ಕಾಲೇಜಿಗೆ ರಜೆ ನೀಡಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಮಾಹಿತಿ ಕಲೆಹಾಕಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.