ಮಂಗಳೂರು, ಫೆ 03 (MSP): ಸಿಆರ್ಜೆಡ್ ವ್ಯಾಪ್ತಿಗೆ ಸೇರುವ ನಗರದ ಹೊರವಲಯದ ಉಳಾಯಿಬೆಟ್ಟಿಗ್ರಾಮದ ಪೆರ್ಮಂಕಿ ಫಲ್ಗುಣಿ ತಟದಲ್ಲಿ ಖಾಸಗಿ ಧಕ್ಕೆ ಯೊಂದನ್ನು ಬಳಸಿಕೊಂಡು ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದ ಮೇಲೆ ಶನಿವಾರ ಜಂಟಿ ದಾಳಿ ನಡೆಸಿರುವ ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, 42 ದೋಣಿ, ಐದು ಲಾರಿ, ಒಂದು ಡೋಜರ್ ಸೇರಿದಂತೆ 1.20 ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಉಳಾಯಿಬೆಟ್ಟಿನಲ್ಲಿ ರವಿರಾಜ್ ಎಂಬುವವರಿಗೆ ಸೇರಿದ ಧಕ್ಕೆಯನ್ನು ಬಳಸಿಕೊಂಡು ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಯೂಸುಫ್ ಉಳಾಯಿಬೆಟ್ಟು, ಇಸಾಕ್ ಉಳಾಯಿಬೆಟ್ಟು, ಹಸನ್ ಉಳಾ ಯಿಬೆಟ್ಟು, ಶರೀಫ್ ಉಳಾಯಿಬೆಟ್ಟು, ವಿನಯ್ ಶೆಟ್ಟಿ ಮತ್ತು ಯಶವಂತ ಆಳ್ವ ಎಂಬುವವರು ಪರವಾನಿಗೆ ಇಲ್ಲದೆ ನದಿಯಿಂದ ಮರಳು ತೆಗೆದು ಸಾಗಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಮಂಗ ಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೆ. ರಾಮರಾವ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿದ್ಧಗೌಡ ಎಚ್. ಭಜಂತ್ರಿ, ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಐ., ಸಹಾಯಕ ಸಬ್ ಇನ್ಸ್ಪೆಕ್ಟರ್ ಹರೀಶ್ ಮತ್ತು ಸಿಬ್ಬಂದಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿಗಳಾದ ಪದ್ಮಶ್ರೀ, ಬಿ.ಕೆ.ಮೂರ್ತಿ ಪಾಲ್ಗೊಂಡಿದ್ದರು.
ಧಕ್ಕೆಯಲ್ಲಿ ಅಲ್ಲಲ್ಲಿ ಮರಳು ಸಂಗ್ರಹಿಸಲಾಗಿತ್ತು. ದೋಣಿ, ವಾಹನಗಳು ಹಾಗೂ ಮರಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸುಪರ್ದಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.