ಮಂಗಳೂರು, ಆ 25 (DaijiworldNews/DB): ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಜಿಲ್ಲೆಯ ಬೆಳವಣಿಗೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನೆಹರೂ ಕುಟುಂಬದ ಬಗ್ಗೆ ಅವಹೇಳನ ಮಾಡುವ ಪ್ರಯತ್ನಗಳು ಮುಂದುವರಿಯುತ್ತಲೇ ಇದೆ. ಸರ್ಕಾರಿ ಜಾಹೀರಾತುಗಳಲ್ಲಿ ನೆಹರೂ ಭಾವಚಿತ್ರವನ್ನೂ ಪ್ರಕಟಿಸುತ್ತಿಲ್ಲ. ನಿಜವಾದ ದೇಶಭಕ್ತರಿಗೆ ಇದು ಅತ್ಯಂತ ನೋವಿನ ವಿಷಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟಗಾರರನ್ನು ಈಗಿನ ಸರ್ಕಾರ ಅವಹೇಳನ ಮಾಡುತ್ತಿದೆ. ಇದು ಅಹಿತಕರವಾದ ಬೆಳವಣಿಗೆ ಎಂದರು.
ಏನನ್ನೇ ಮಾತನಾಡುವುದಕ್ಕೆ ಮೊದಲು ಇತಿಹಾಸವನ್ನು ಅರಿತುಕೊಳ್ಳಬೇಕು. ಇತಿಹಾಸದ ಪುಸ್ತಕಗಳನ್ನು ಓದಿ. ಚಕ್ರವರ್ತಿ ಸೂಲಿಬೆಲೆ ಬರೆದ ಪುಸ್ತಕಗಳನ್ನಲ್ಲ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರೇ ಎಂಬುದನ್ನು ತಿಳಿದುಕೊಳ್ಳಲು ಇತಿಹಾಸ ಪುಸ್ತಕ ಓದಿ ಎಂದವರು ಇದೇ ವೇಳೆ ತಿಳಿಸಿದರು.