ಮಂಗಳೂರು, ಫೆ 03 (MSP): ಕರಾವಳಿ ಜಿಲ್ಲೆಗಳಿಗೆ ಪಡಿತರ ನೀಡುವಾಗ ಇಲ್ಲಿ ಸ್ಥಳೀಯವಾಗಿ ಬಳಸುವ ಕುಚ್ಚಲಕ್ಕಿಯನ್ನೇ ನೀಡಬೇಕೆಂದು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ| ಎನ್. ಕೃಷ್ಣಮೂರ್ತಿ ಅವರು ಹೇಳಿದರು. ಫೆ. 2 ರ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ವಿಚಾರವನ್ನು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಬೇರೆ ಜಿಲ್ಲೆಗಳಲ್ಲಿ ಆಯಾ ಪ್ರದೇಶದ ಬೇಡಿಕೆಯಂತೆ ಯುನಿಟ್ವೊಂದಕ್ಕೆ 5 ಕೆಜಿ ಬೆಳ್ತಿಗೆ ಜತೆ 2 ಕೆಜಿ ಗೋಧಿ ನೀಡಲಾಗುತ್ತದೆ. ಆದರೆ ದ.ಕ., ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಕುಚ್ಚಲಕ್ಕಿಗೆ ಬೇಡಿಕೆ ಇದೆ. ಈಗ ಅಪರೂಪಕ್ಕೊಮ್ಮೊಮ್ಮೆ ಕುಚ್ಚಲಕ್ಕಿ ನೀಡಲಾಗುತ್ತಿದ್ದು, ಹೆಚ್ಚಾಗಿ ಬೆಳ್ತಿಗೆಯನ್ನೇ ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಇದಲ್ಲದೆ ಪಡಿತರ ಸಾಮಾಗ್ರಿ ವಿತರಿಸುವ ಅಂಗಡಿ ಭಾನುವಾರ ತೆರೆದಿರಲೇಬೇಕು. ಆದರೆ ಹಲವು ಕಾರಣ ನೀಡಿ ಅಂಗಡಿ ತೆರೆಯದಿರುವ ಬಗ್ಗೆ ಗಮನಕ್ಕೆ ಬಂದಿದೆ. ಮತ್ತೆ ಇಂತಹ ಪ್ರಕರಣ ಪುನಾರವರ್ತನೆಯಾದರೆ ಇದನ್ನು ಸರಕಾರದ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಸಿದರು.
ದಕ್ಷಿಣ ಕನ್ನಡದಲ್ಲಿ ತೊಗರಿ ಬೇಳೆಗೆ ಬೇಡಿಕೆ ಇಲ್ಲ. ಆದರೆ ಪಡಿತರದಾರರು ತೊಗರಿ ಪಡೆದುಕೊಳ್ಳದಿದ್ದಲ್ಲಿ ಅವರಿಗೆ ಅದರ ಬದಲಾಗಿ ಅಕ್ಕಿ ನೀಡಬೇಕು. ಆದರೆ ಕೆಲವೆಡೆ 1 ಕೆಜಿ ತೊಗರಿಯನ್ನು ನೀಡಿದಂತೆ ತೋರಿಸಿ ಹೊರಗೆ ಹೆಚ್ಚಿನ ಕ್ರಯಕ್ಕೆ ಮಾರಾಟ ಮಾಡುವುದು ಗಮನಕ್ಕೆ ಬಂದಿದೆ. ಈ ನ್ಯೂನತೆಯನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸದಸ್ಯರಾದ ವಿ.ಬಿ. ಪಾಟೀಲ್, ಮಂಜುಳಾ, ಬಿ.ಎ. ಮಹಮದ್ ಅಲಿ, ಡಿ.ಜಿ. ಹಸಬಿ, ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್, ಜಿ.ಪಂ. ಸಿಇಒ ಡಾ| ಸೆಲ್ವಮಣಿ ಆರ್. ಉಪಸ್ಥಿತರಿದ್ದರು.