ಮಂಗಳೂರು, ಅ 25 (DaijiworldNews/MS): ನವದೆಹಲಿಯಲ್ಲಿ ಜಾರಿಗೆ ತಂದಿರುವ ಮೊಹಲ್ಲ ಕ್ಲಿನಿಕ್ ಮಾದರಿಯಲ್ಲಿಯೇ ಆರೋಗ್ಯ ಸೇವೆಯನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲಿಯೂ ಜಾರಿಗೊಳಿಸಲು ಚಿಂತಿಸಲಾಗಿದೆ.
ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 14ಕಡೆ "ನಮ್ಮ ಕ್ಲಿನಿಕ್" ತೆರೆಯಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದೆ.
ರಾಜ್ಯದಲ್ಲಿ ಒಟ್ಟು 940 ಕ್ಲಿನಿಕ್ ಬರಲಿದ್ದು, ಈ ಪೈಕಿ ಮೊದಲ ಹಂತದಲ್ಲಿ ೪೩೮ ನಮ್ಮ ಕ್ಲಿನಿಕ್ ಕಾರ್ಯಾರಂಭಿಸಲಿದೆ. ಮಂಗಳೂರು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7 , ಉಳ್ಳಾಲ ,ಮೂಡುಬಿದಿರೆ, ಮೂಲ್ಕಿ ಬಂಟ್ವಾಳ ಪುತ್ತೂರು, ಕಡಬ, ಹಾಗೂ ಸುಳ್ಯ ಭಾಗದಲ್ಲಿ ತಲಾ ಒಂದೊಂದು ಕ್ಲಿನಿಕ್ ಗಳು ಆರಂಭವಾಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮಾದರಿಯಲ್ಲೇ ನಮ್ಮ ಕ್ಲಿನಿಕ್ ಕಾರ್ಯಾಚರಿಸಲಿದೆ. ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಇದು ಕೆಲಸ ,ಮಾಡಲಿದೆ. ವೈದ್ಯರು, ಸ್ಟಾಫ್ ನರ್ಸ್ , ಡಾಟಾ ಎಂಟ್ರಿ, ಗ್ರೂಪ್ ಡಿ, ಲ್ಯಾಬ್ ಟೆಕ್ನೀಶಿಯನ್ ಸಿಬ್ಬಂದಿ ಇರಲಿದ್ದಾರೆ
'ನಮ್ಮ ಕ್ಲಿನಿಕ್' ಯೋಜನೆಯಡಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 7 ಸೇರಿದಂತೆ ಸ್ಲಂ ಪ್ರದೇಶಗಳಲ್ಲಿ ಈ ಕ್ಲಿನಿಕ್ ಸ್ಥಾಪಿಸಬೇಕಾಗಿದ್ದು, ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶಗಳಿಲ್ಲದಿರುವುದರಿಂದ ಕಟ್ಟಡ ಕಾರ್ಮಿಕರು ವಾಸಿಸುವ ಪ್ರದೇಶಗಳಲ್ಲಿ ಈ ಕ್ಲಿನಿಕ್ ರಚಿಸಲಾಗುವುದು.