ಬಂಟ್ವಾಳ, ಅ 25 (DaijiworldNews/MS): ಬುಧವಾರ ಬೆಳಿಗ್ಗೆಯಿಂದ ಸುರಿದ ಬಾರಿ ಗಾಳಿ ಮಳೆಗೆ ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಜ್ಜೊನಿ ಎಂಬಲ್ಲಿ ರಸ್ತೆಗೆ ಮರ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ಅಡಚಣೆಯಾದ ಘಟನೆ ನಡೆದಿದೆ.
ಕಲ್ಲಡ್ಕ – ವಿಟ್ಲ ರಸ್ತೆ ಯ ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಲಿಂಜ ಸಮೀಪದ ಕೋಡಪದವು ಕ್ರಾಸ್ ನ ಮಜ್ಜೊನಿ ಎಂಬಲ್ಲಿ ಅರಣ್ಯ ಇಲಾಖೆಗೆ ಸೇರಿದ ಬೃಹತ್ ಗಾತ್ರದ ಮರವೊಂದು ಸಂಜೆ ಸುಮಾರು 4.30 ರ ವೇಳೆ ಗುಡ್ಡದ ಮೇಲಿಂದ ಬುಡಸಮೇತ ರಸ್ತೆಗೆ ಬಿದ್ದು ಕೆಲವು ಹೊತ್ತು ಸಂಚಾರಕ್ಕೆ ತೊಂದರೆಯಾಯಿತು.ರಸ್ತೆಯ ಬದಿಯಲ್ಲಿ ಇದ್ದ ವಿದ್ಯುತ್ ತಂತಿಗೆ ಮರ ಬಿದ್ದ ಪರಿಣಾಮವಾಗಿ ಎರಡು ವಿದ್ಯುತ್ ಕಂಬಗಳು ಧರೆಗುರುಳಿದು ಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಬಗ್ಗೆ ಘಟನೆ ತಿಳಿದು ಕೆಲಿಂಜ ನಿವಾಸಿ ಚಂದ್ರಶೇಖರ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳ ತಂಡ ಹಾಗೂ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ವೀರಕಂಭ ಗ್ರಾ.ಪಂ.ಅಧ್ಯಕ್ಷ ದಿನೇಶ್ ಪೂಜಾರಿ, ಸದಸ್ಯ ಜಯಪ್ರಸಾದ್ ಅವರು ಸ್ಥಳದಲ್ಲಿ ನಿಂತು ತೆರವು ಕಾರ್ಯಕ್ಕೆ ಸಹಕಾರ ನೀಡಿದರು.
ತಾಲೂಕಿನ ವಿವಿಧೆಡೆ ಹಾನಿ
ಬಂಟ್ವಾಳ ತಾಲೂಕಿನ ಹಲವಾರು ಕಡೆಗಳಲ್ಲಿ ಮಳೆಹಾನಿ ಉಂಟಾಗಿದ್ದು, ಅಮ್ಮುಂಜೆ ಗ್ರಾಮದಲ್ಲೂ ಮರಬಿದ್ದು ವಿದ್ಯುತ್ ಕಂಬಗಳು ಧರೆಗುರುಳಿದೆ. ಬಾಳ್ತಿಲ ಗ್ರಾಮದ ಬಸ್ತಿ ಬಳಿ ನಿವಾಸಿ ಸೋಮಪ್ಪ ನಾಯ್ಕ ಅವರ ವಾಸ್ತವ್ಯದ ಮನೆಗೆ ಮರ ಮತ್ತು ಮಣ್ಣು ಜರಿದು ಬಿದ್ದು ಹಾನಿಯಾಗಿರುತ್ತದೆ. ನೆಟ್ಟ ಮುಡ್ನೂರು ಗ್ರಾಮದ ಭಗವಂತಕೋಡಿ ನಿವಾಸಿ ಅಬ್ದುಲ್ ಮಜೀದ್ ಬಿನ್ ಅಬೂಬಕ್ಕರ್ ಅವರ ಮನೆಯ ಹಿಂಭಾಗದ ಗುಡ್ಡ ಕುಸಿದಿರುತ್ತದೆ.
ಅಮ್ಮಾಡಿ ಗ್ರಾಮದ ಕೆಂಪುಗುಡ್ಡೆ ನಿವಾಸಿ ಮಂಜುನಾಥ ಅವರ ಮನೆಯ ಹಿಂಬದಿ ಕುಸಿದಿರುತ್ತದೆ. ಹೊನ್ನಪ್ಪ ಬಿನ್ ಕೋಟ್ಯಪ್ಪ ಅವರ ಮನೆಯ ಕಂಪೌಂಡ್ ಕುಸಿದು ಬಿದ್ದು ಹಾನಿ ಸಂಭವಿಸಿರುತ್ತದೆ. ವಿಟ್ಲ ಕಸ್ಬಾ ಗ್ರಾಮದ ಪೂವಪ್ಪ ಮೂಲ್ಯ ಎಂಬವರ ಮನೆಗೆ ಹಾನಿಯಾಗಿರುತ್ತದೆ ಎಂದು ತಾಲೂಕು ಕಚೇರಿಪ್ರ ಕಟಣೆ ತಿಳಿಸಿದೆ.