Karavali
'ಉಡುಪಿ, ದ.ಕ. ಜಿಲ್ಲೆಗಳು ಆಡಳಿತಾತ್ಮಕವಾಗಿ ಬೇರ್ಪಟ್ಟಿವೆಯೇ ಹೊರತು ಭಾವನಾತ್ಮಕವಾಗಿಯಲ್ಲ' - ಜಯಪ್ರಕಾಶ್ ಹೆಗ್ಡೆ
- Wed, Aug 24 2022 07:05:18 PM
-
ಉಡುಪಿ, ಆ 24 (DaijiwroldNews/HR): ಒಂದೆಡೆ ಭಾರತಕ್ಕೆ ಅಮೃತ ಮಹೋತ್ಸವದ ಸಂಭ್ರಮವಾದರೆ ಮತ್ತೊಂದೆಡೆ ಉಡುಪಿ ಜಿಲ್ಲೆಗೆ 25 ವರ್ಷದ ರಜತ ಮಹೋತ್ಸವದ ಸಂಭ್ರಮ. ಉಡುಪಿ ಒಂದು ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಕನಸನ್ನು ಕಂಡಿದ್ದ, ಆ ಸಂದರ್ಭದಲ್ಲಿ ಉಸ್ತುವಾರಿಯಾಗಿ ಪ್ರತ್ಯೇಕ ಜಿಲ್ಲೆಯಾಗುವಲ್ಲಿ ಮಹತ್ತರ ಪಾತ್ರ ವಹಿಸಿದ್ದ, ಮಾಜಿ ಸಂಸದ ಹಾಗೂ ಕರ್ನಾಟಕ ಹಿಂದುಳಿದ ವರ್ಗಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆಯವರೊಂದಿಗೆ ದಾಯ್ಜಿವರ್ಲ್ಡ್ ನಡೆಸಿದ ಸಂದರ್ಶನದಲ್ಲಿ ಅವರ ಮಾತುಗಳು.
ಸಂದರ್ಶಕರು: ಚೇತನ್ ಶೆಟ್ಟಿ
ಪ್ರಶ್ನೆ: ಉಡುಪಿ ಜಿಲ್ಲೆಯು ಇದೇ ರೀತಿಯಾಗಿರಬೇಕೆಂಬ ನಿಮ್ಮ ಕನಸು ನನಸಾಗಿದೆಯೇ?
ಉತ್ತರ: ಜಿಲ್ಲೆಯು ಹಂತ ಹಂತವಾಗಿ ಮುಂದುವರಿಯುತ್ತಾ ಬಂದಿರುವುದು ತೃಪ್ತಿಯನ್ನು ನೀಡಿದೆ. ಹಾಗೆಯೇ ಇನ್ನೂ ಕೆಲವು ವಿಚಾರಗಳು ಬಾಕಿ ಉಳಿದಿವೆ. ಅರಣ್ಯ ಇಲಾಖೆ ಹಾಗು ಉಪವಿಭಾಗಾಧಿಕಾರಿಗಳ ಕಛೇರಿಗಳಿಗೆ ಸಹಾಯಕ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಬೇಕಿದೆ.
ಪ್ರ: ಜೊತೆಯಲ್ಲಿಯೇ ಇದ್ದ ಉಭಯ ಜಿಲ್ಲೆಗಳನ್ನು ಬೇರ್ಪಡಿಸಿದಾಗ ವಿರೋಧಗಳು ಎದುರಾಯಿತೇ?
ಉ: ಅಂತಹದ್ದೇನು ವಿರೋಧಗಳು ಎದುರಾಗಲಿಲ್ಲ. ಏಕೆಂದರೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಆಡಳಿತಾತ್ಮಕವಾಗಿ ಬೇರ್ಪಟ್ಟಿವೆಯೇ ಹೊರತು ಭಾವನತ್ಮಕವಾಗಿ ಅಲ್ಲ. ಜನರಲ್ಲಿ ಅಂತಹ ಯಾವುದೇ ಭಾವನೆ ಇಲ್ಲ.
ಪ್ರ: ಜಿಲ್ಲೆಯನ್ನು ರಚನೆ ಮಾಡುವುದಕ್ಕಿಂತಲೂ ಅದನ್ನು ಅಭಿವೃದ್ದಿಯ ಹಂತಕ್ಕೆ ತರುವುದು ಸವಾಲಿನ ಕೆಲಸವಾಗಿದೆ. ಅಂತಹ ಸಂದರ್ಭಗಳಲ್ಲಿ ನೀವು ಯಾವ ರೀತಿಯ ಸವಾಲುಗಳನ್ನು ಎದುರಿಸಿದ್ದೀರಿ?
ಉ: ಜಿಲ್ಲಾಧಿಕಾರಿಗಳ ಕಛೇರಿಗೆ ಹಾಗೆಯೇ ಜಿಲ್ಲಾ ಪಂಚಾಯ್ತಿಗೆ ಹಂತಹಂತವಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಯಿತು. ಇದರಿಂದಾಗಿ ಇಂದು ಉಡುಪಿಯಲ್ಲಿ ಎಲ್ಲಾ ಕಛೇರಿಗಳು ಲಭ್ಯವಿದೆ. ಯಾವುದೇ ಇಲಾಖೆಯು ಹಿಂದುಳಿಯಲಿಲ್ಲ.
ಪ್ರ: ಉಡುಪಿ ಜಿಲ್ಲೆಯಲ್ಲಿ 25 ವರ್ಷಗಳ ಹಿಂದೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಹೇಗಿತ್ತು?
ಉ: ಅದರ ಕುರಿತಾಗಿ ಹೇಳುವುದಾದರೆ ಆಗ ಉಡುಪಿ ತಾಲೂಕು ಕೇಂದ್ರವಾಗಿದ್ದರಿಂದ ಹಲವು ಶಿಕ್ಷಣ ಸಂಸ್ಥೆಗಳು ಇದ್ದವು. ಅದರ ನಂತರದಲ್ಲಿಯೂ
ಹಲವಾರು ಸಂಸ್ಥೆಗಳು ಪ್ರಾರಂಭಗೊಂಡಿತು. ಮುಂದುವರಿದು ಬಂಡವಾಳಗಳೂ ಬರತೊಡಗಿದವು. ಹೀಗೆಯೇ ಭವಿಷ್ಯದಲ್ಲಿ ಕೂಡ ಬಂಡವಾಳಗಾರರು ಹೆಚ್ಚಾಗಿ ಉದ್ಯೋಗಗಳೂ ಹೆಚ್ಚಾಗಬೇಕೆಂಬುದೇ ನನ್ನ ಆಸೆ.
ಪ್ರ: 25 ವರ್ಷಗಳ ಹಿಂದೆ ಮಣಿಪಾಲ ನಗರ ಹೇಗಿತ್ತು?
ಉ: ಮಣಿಪಾಲ ಎಂಬ ಹೆಸರು ಹಿಂದೆಯೂ ಇದ್ದರೂ ಅದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆದಿರಲಿಲ್ಲ. ನಂತರ ಜಿಲ್ಲಾಧಿಕಾರಿಗಳ ಕಛೇರಿಯು ಅಲ್ಲಿಗೆ ವರ್ಗಾಯಿತವಾದ್ದರಿಂದ ಅದು ಇನ್ನೂ ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿತು. ಆ ಒಂದೇ ಕಛೇರಿಯಲ್ಲಿ ಎಲ್ಲಾ ಇಲಾಖೆಗಳನ್ನು ವ್ಯವಸ್ಥಿತವಾಗಿ ಇರಿಸಲಾಗಿರುವುದರಿಂದ ಆಡಳಿತಕ್ಕೆ ಇನ್ನೂ ಹೆಚ್ಚು ಅನುಕೂಲಕಾರಿಯಾಗಿದೆ.
ಪ್ರ: ಈ 25 ವರ್ಷಗಳಲ್ಲಾದ ಅಭಿವೃದ್ದಿ ಕಾರ್ಯಗಳ ಮೆಲುಕು?
ಉ: ಅಭಿವೃಧ್ದಿ ಕಾರ್ಯಗಳನ್ನು ಎರಡು ರೀತಿಯಲ್ಲಿ ಹೇಳುವುದಾದರೆ, ಹಳ್ಳಿಯ ರಸ್ತೆಗಳು, ಎರಡನೆಯದ್ದು ಸೇತುವೆಗಳು. ಅದೇ ರೀತಿ ಅಣೆಕಟ್ಟುಗಳು ಅಭಿವೃದ್ಧಿ ಆಗಿವೆ. ಇವು ರೈತರಿಗೆ ಕೂಡಾ ಸಾಕಷ್ಟು ಸಹಾಯಕವಾಗಿದೆ. ಮೀನುಗಾರರಿಗೆ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಕೂಡಾ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಆಗ ಕಂಡ ಉಡುಪಿಗೂ ಈಗಿನ ಉಡುಪಿಗೂ ತುಂಬಾ ವ್ಯತ್ಯಾಸವಿದೆ.
ಪ್ರ: ಉಡುಪಿಯಲ್ಲಿ ರಜತ ಮಹೋತ್ಸವದ ಸಂಭ್ರಮ ಹೇಗಿದೆ?
ಉ: ರಜತ ಮಹೋತ್ಸವದ ಆಚರಣೆಯ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ 25 ವರ್ಷಗಳಲ್ಲಾದ ಬದಲಾವಣೆಗಳ ಅಥವಾ ಅಭಿವೃದ್ದಿಗಳ ಪಟ್ಟಿಯನ್ನು ಮಾಡಲಾಗುತ್ತಿದೆ. ಏಕೆಂದರೆ ಜನರಿಗೆ ಇತಿಹಾಸದ ಅರಿವು ಬಹುಮುಖ್ಯ. ಇತಿಹಾಸವನ್ನು ತಿಳಿಯದಿದ್ದರೆ ವರ್ತಮಾನದಲ್ಲಿ ಹೇಗೆ ಕಳೆಯಬೇಕು ಎಂಬ ಅರಿವು ಕೂಡ ನಮಗಿರುವುದಿಲ್ಲ. ಇದರ ಜೊತೆಗೆಯೇ ಸಾಕ್ಷ್ಯಚಿತ್ರಗಳು ಹಾಗೂ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಗುವುದು. ಮತ್ತು 6 ತಿಂಗಳವರೆಗೆ ಅಂದರೆ ಜನವರಿ 25ರವರೆಗೆ ಇದರ ಸಂಭ್ರಮಾಚರಣೆಯನ್ನು ಮಾಡಲಾಗುತ್ತದೆ.
ಪ್ರ: ಈ 25 ವರ್ಷಗಳಲ್ಲಿ ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕೆಂಬ ಕನಸು ನನಸಾಗಲಿಲ್ಲ ಎಂಬ ಕೊರಗು ಇದೆಯೇ?
ಉ: ಖಂಡಿತವಾಗಿಯೂ ಹೌದು. ಪ್ರಚಲಿತ ವೈದ್ಯಕೀಯ ವ್ಯವಸ್ಥೆಯು ಹೆಚ್ಚು ಸವಾಲಿನ ವಿಚಾರವಾಗಿದೆ. ಜಿಲ್ಲೆಯ ಸಾಮಾನ್ಯ ಜನರಿಗೆ ಕೂಡಾ ತುರ್ತು ಅವಶ್ಯಕತೆಗೆ ಸುಲಭವಾಗಿ ವೈದ್ಯಕೀಯ ನೆರವು ಲಭಿಸುವಂತಾಗಬೇಕು ಎಂಬುದೇ ನನ್ನ ನಿಲುವು.
ಪ್ರ: ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರವು ಯಶಸ್ಸು ಕಾಣಲಿಲ್ಲವೇ?
ಉ: ಕರಾವಳಿಯಲ್ಲಿ ಪ್ರವಾಸೋದ್ಯಮವು ಇನ್ನೂ ಅಭಿವೃದ್ದಿಯಾಗಬೇಕಿದೆ. ಇದರ ಕುರಿತಾದ ನೋವು ಇನ್ನೂ ನನ್ನ ಮನದಲ್ಲಿದೆ. ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚು ಒತ್ತು ನೀಡುವುದರ ಮೂಲಕ ಇತರ ರಾಜ್ಯಗಳಂತೆ ಇಲ್ಲೂ ಕೂಡಾ ಪ್ರವಾಸೋದ್ಯಮವು ಅಬಿವೃಧ್ಧಿಯಾಗಬೇಕಿದೆ.
ಪ್ರ: ನಮ್ಮ ಕೆಲವು ಸಂಸ್ಕೃತಿಯನ್ನು ಬದಿಗೆ ಸರಿಸಿ ಆಚಾರಗಳನ್ನು ಸಡಿಲಗೊಳಿಸಿ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಸಾಧ್ಯವೇ?
ಉ: ನಮ್ಮ ಸಂಸ್ಕೃತಿಯನ್ನು ಸಂಪೂರ್ಣವಾಗಿ ಕೈಬಿಟ್ಟು ಅಭಿವೃದ್ದಿಯೆಡೆಗೆ ಹೆಜ್ಜೆ ಹಾಕಲು ಸಾಧ್ಯವಿಲ್ಲ. ಉದಾಹರಣೆಗೆ ಗೋಕರ್ಣದ ಭಾಗದಲ್ಲಿ ದೇವಸ್ಥಾನಗಳಿದ್ದರೂ ಪ್ರವಾಸೋದ್ಯಮವು ಮುಂದುವರಿದಿದೆ. ಅದೇ ರೀತಿ ನಮ್ಮ ಭಾಗದಲ್ಲಿಯೂ ಕೂಡಾ ಜಾಗೃತಿಯೊಂದಿಗೆ ಪ್ರಗತಿಯ ಕೆಲಸ ಮಾಡಬೇಕಾಗುತ್ತದೆ.
ಪ್ರ: ಮುಂದಿನ 50 ವರ್ಷಗಳಲ್ಲಿ ನಿಮ್ಮ ಪ್ರಕಾರ ಉಡುಪಿಯು ಹೇಗಿರಬೇಕು?
ಉ: ಮುಂಬರುವ ದಿನಗಳಲ್ಲಿ ಪರಿಸರಸ್ನೇಹಿ ಕೈಗಾರಿಕೆಗಳು ಹೆಚ್ಚಾಗಬೇಕು. ಇಲ್ಲಿನ ಮಕ್ಕಳಿಗೆ ಇಲ್ಲಿಯೇ ಉದ್ಯೋಗ ಲಭಿಸುವಂತಾಗಬೇಕು. ಬ್ಯಾಂಕಿಂಗ್, ಪೊಲೀಸ್ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕರಾವಳಿ ಜಿಲ್ಲೆಯವರು ಹೆಚ್ಚು ಹೆಚ್ಚು ಭಾಗಿಯಾಗಬೇಕು.
ಪ್ರ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನಿಮ್ಮ ಅವಧಿಯಲ್ಲಿ ಮಾಡಿದ ಯೋಜನೆಗಳು?
ಉ: ಹಿಂದುಳಿದ ವರ್ಗಗಳ ಬಗ್ಗೆ ಇದುವರೆಗೆ 17 ವರದಿಗಳನ್ನು ರಚಿಸಿ ಅದನ್ನು ಸರ್ಕಾರಕ್ಕೆ ತಲುಪಿಸಲಾಗಿದೆ. ಒಂದಷ್ಟು ವರ್ಗಗಳಿಗೆ ಸೀಮಿತವಾಗಿದ್ದ ಮೀಸಲಾತಿಯನ್ನು ವಿಸ್ತರಿಸುವ ಕೆಲಸವನ್ನು ಮಾಡಲಾಗಿದೆ. ಅನಾಥ ಮಕ್ಕಳಿಗೆ ಮೀಸಲಾತಿ ನೀಡುವ ಕುರಿತು ಚರ್ಚೆ ನಡೆಯುತ್ತಿದೆ.
ಪ್ರ: ಮುಂದೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದನಾಗಬೇಕೆಂಬ ಆಕಾಂಕ್ಷೆಯಿದೆಯೇ?
ಉ: ಇದುವರೆಗೆ ಮಾಡಿದ ಕೆಲಸದ ಕುರಿತು ತೃಪ್ತಿಯಿದೆ. ಸದ್ಯಕ್ಕೆ ಅದರ ಕುರಿತು ಯೋಚನೆಯಿಲ್ಲ.
ಪ್ರ: ಕೊನೆಯದಾಗಿ ನೀವು ಜನತೆಗೆ ನೀಡುವ ಮನವಿ ಅಥವಾ ಸಂದೇಶವೇನು?
ಉ: ಜಿಲ್ಲೆಯ ಅಧಿಕಾರಿ ವರ್ಗಗಳು ಅಥವಾ ಕಛೇರಿಗಳು ಪರಿಣಾಮಕಾರಿಯಗಿ ಕೆಲಸ ನಿರ್ವಹಿಸಬೇಕು. ಹಾಗೆಯೆ ರಾಜಕಾರಣಿಗಳು ಪ್ರಗತಿ ಪರಿಶೀಲನಾ ಸಭೆಗಳನ್ನು ಕಟ್ಟುನಿಟ್ಟಾಗಿ ಮಾಡಬೇಕು. ಆಗ ನಮ್ಮ ಹೊಸ ಜಿಲ್ಲೆ ನಿರ್ಮಾಣದ ಉದ್ದೇಶವು ಸಂಪೂರ್ಣಗೊಳ್ಳುತ್ತದೆ.
ಬರಹ: ರಿಯಾನ ಬೆಳಪು
ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಂಜಿಎಂ ಕಾಲೇಜು, ಉಡುಪಿ