ಬೈಂದೂರು, ಆ 24 (DaijiwroldNews/HR): ಕಾರ್ಯಕರ್ತರು ಮತ್ತು ಸಾರ್ವಜನಿಕರ ಅಹವಾಲುಗಳಿಗೆ ಸ್ಪಂಧಿಸುತ್ತಿರುವುದು ಭಾರತೀಯ ಜನತಾ ಪಕ್ಷದ ಪ್ರತಿ ಸಚಿವರ ಜವಾಬ್ದಾರಿ. ಹೀಗಾಗಿ ಪ್ರತಿ ತಿಂಗಳಿಗೊಮ್ಮೆ ಪ್ರತಿ ಕ್ಷೇತ್ರದ ಪಕ್ಷದ ಕಛೇರಿ ಬೇಟಿ ಮಾಡಿ ಅಹವಾಲು ಸ್ವೀಕರಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೈಂದೂರು ಬಿಜೆಪಿ ಕಛೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದುಳಿದ ವರ್ಗದ 2439 ಹಾಸ್ಟೆಲ್ಗಳಿವೆ,ಒಟ್ಟು 2 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಪ್ರಸ್ತುತ 25% ಶೇಖಡಾ ಹೆಚ್ಚಿಸಿದ ಪರಿಣಾಮ 31 ಸಾವಿರ ಹೆಚ್ಚಿಗೆ ವಿದ್ಯಾರ್ಥಿಗಳಿಗೆ ಅವಕಾಶ ದೊರೆಯುತ್ತದೆ.ಬಾಡಿಗೆ ಕಟ್ಟಡದಲ್ಲಿ ಕೂಡ ಹಾಸ್ಟೆಲ್ ಆರಂಭಿಸಲು 250 ಕೋಟಿ ಅನುದಾನ ಮೀಸಲಿರಿಸಿದೆ ಎಂದರು.
ಕೇಂದ್ರ ಸರಕಾರದ ಸಾಗರಮಾಲಾ ಯೋಜನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಮೂಲಕ ಪ್ರಧಾನಿ ಕಾರ್ಯಕ್ರಮದ ವ್ಯವಸ್ಥಿತ ಆಯೋಜನೆಯ ಸಿದ್ದತೆ ನಡೆಯುತ್ತಿದೆ. 300 ಜನ ಮಹಿಳೆಯರಿಗೆ ಸ್ವಂತ ಉದ್ಯೋಗ ಆರಂಭಿಸಲು ಪ್ರತಿಷ್ಠಿತ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತಿದೆ. ದುಡಿಯುವ ಕೈಗಳನ್ನು ಶಕ್ತಿ ನೀಡುವ ಉದ್ದೇಶ ಹೊಂದಿದೆ. ಉತ್ತರ ಕನ್ನಡ,ಉಡುಪಿ,ದಕ್ಷಿಣ ಕನ್ನಡ ಜಿಲ್ಲೆ ಸೇರಿ 3 ಸೇವಾ ತರಬೇತಿ ಸಂಸ್ಥೆ ಶೀಘ್ರದಲ್ಲಿ ಆರಂಭಿಸಲಾಗುವುದು ಎಂದಿದ್ದಾರೆ.
ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ವಿವಿಧ ಅಹವಾಲುಗಳನ್ನು ಸ್ವೀಕರಿಸಲಾಯಿತು. ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಜಡ್ಡು, ಪ್ರಿಯದರ್ಶಿನಿ ದೇವಾಡಿಗ ಹಾಜರಿದ್ದರು.