ಕುಂದಾಪುರ,ಫೆ 03 (MSP): ಕುಂಭಾಶಿ ಗ್ರಾ.ಪಂ.ವ್ಯಾಪ್ತಿಯ ರಾ.ಹೆ. 66ರ ಕೊರವಡಿ ಕ್ರಾಸ್ ಸಮೀಪದ ಮೀನು ಮಾರುಕಟ್ಟೆಯ ಎದುರಿನ ಪಾಳು ಬಿದ್ದಿದ್ದ ಹಳೆಯ ಶೆಡ್ ನಲ್ಲಿ ಶುಕ್ರವಾರ ಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪ್ರಕರಣವು ಕುತೂಹಲವನ್ನು ಕೆರಳಿಸುತ್ತಿದೆ.
ಪತ್ತೆಯಾದ ಮಹಿಳೆಯ ಆಸ್ಥಿಪಂಜರದ ಗುರುತು ಪತ್ತೆಗಾಗಿ ಪೊಲೀಸರು ವಿಧಿ ವಿಜ್ಞಾನ ತಜ್ಞರನ್ನು ಸ್ಥಳಕ್ಕೆ ಕರೆಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಮಣಿಪಾಲದ ಫೋರೆನ್ಸಿಕ್ ತಜ್ಞ ಡಾ| ನಿರ್ಮಲ್ ಕುಮಾರ್ ಅವರು ಫೆ.2ರಂದು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸ್ಥಳದಲ್ಲಿ ದುರೆತ ಮಾಸಿದ ಬಟ್ಟೆ ತುಂಡು ಹಾಗೂ ಚಹರೆಯಿಂದ ಅಸ್ಥಿಪಂಜರ ಮಹಿಳೆಯದ್ದಾಗಿದ್ದು ಮೂರು ವರ್ಷದ ಹಿಂದೆ ಮೃತಪಟ್ಟರಬಹುದೆಂದು ಅಂದಾಜಿಸಲಾಗಿದೆ. ಹಲ್ಲು ಹಾಗೂ ಅಂಗಾಂಗಳ ಮೂಳೆ ಪರೀಕ್ಷೆಯಿಂದ ಮೃತ ವ್ಯಕ್ತಿಯ ವಯಸ್ಸು ಹಾಗೂ ಮೂಳೆ ಪರೀಕ್ಷೆಯಿಂದ ಮೃತ ವ್ಯಕ್ತಿಯ ವಯಸ್ಸು ಹಾಗೂ ಲಿಂಗ ಪತ್ತೆ ಮಾಡಿ ಬಳಿಕ ಪರಿಸರದಲ್ಲಿ ನಾಪತ್ತೆಯಾಗಿರುವ ವ್ಯಕ್ತಿಗಳ ಚಹರೆಗಳಿಗೆ ಹೋಲಿಕೆಯಾದರೆ ಡಿಎನೆ ಪರೀಕ್ಷೆ ಮೂಲಕ ಗುರುತು ಪತ್ತೆಗೆ ಪೊಲೀಸ್ ಇಲಾಖೆ ಮುಂದಾಗಿದೆ.
ಮಾಲತಿ ಶೆಟ್ಟಿ ಕೇಸ್ ಗೆ ಸಂಬಂಧವಿದೆಯೇ?
2015ರ ಜೂ.24ರಂದು ಮಧ್ಯಾಹ್ನ 1:30ರ ಸುಮಾರಿಗೆ ತೆಕ್ಕಟ್ಟೆ ಸಮೀಪದ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆಯಲ್ಲಿರುವ ತನ್ನ ಮನೆಯಿಂದ ಕೆ. ಭಾಸ್ಕರ ಶೆಟ್ಟರ ಪತ್ನಿ ಕೊರ್ಗಿ ಮಾಲತಿ ಶೆಟ್ಟಿ (65) ನಾಪತ್ತೆಯಾಗಿದ್ದರು. ಆ ಪ್ರಕರಣವನ್ನು ಇನ್ನೂ ಪೊಲೀಸರಿಗೆ ಭೇದಿಸಲಾಗಲಿಲ್ಲ. ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಈಗ ಮತ್ತೆ ಕೇಸು ದಾಖಲಾಗಿದೆ. ಈ ನಡುವೆ ಅಸ್ಥಿಪಂಜರ ಸಿಕ್ಕಿದ್ದು, ಇದಕ್ಕೂ ನಾಪತ್ತೆಯಾಗಿರುವ ಮಾಲತಿ ಶೆಟ್ಟಿಗೂ ಸಂಬಂಧವಿದ್ದೀತೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ಮೂಡಿದೆ.